ಬೆಂಗಳೂರು: ಖಾಸಗಿ ಶಾಲೆಗಳು ಶಿಕ್ಷಣ ಹಕ್ಕು ಕಾಯ್ದೆಯಡಿ ದಾಖಲಾದ ವಿದ್ಯಾರ್ಥಿಗಳು ಮತ್ತು ಸಂಪೂರ್ಣ ಶುಲ್ಕ ಪಾವತಿಸಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳ ಮಧ್ಯೆ ತಾರತಮ್ಯ ತೋರಿಸಬಾರದು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗ (ಕೆಎಸ್ ಸಿಪಿಸಿಆರ್) ಎಚ್ಚರಿಕೆ ನೀಡಿದೆ.
ಆರ್ ಟಿಐ ಕಾಯ್ದೆಯನ್ನು ಖಾಸಗಿ ಶಾಲೆಗಳು ಉಲ್ಲಂಘಿಸುತ್ತಿವೆ ಎಂದು ಹಲವು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಇಂತಹ ಶಾಲೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಆಯೋಗ ಎಚ್ಚರಿಕೆ ನೀಡಿದೆ.
ಆಯೋಗದ ಅಧಿಕಾರಿಗಳು ಹೇಳುವ ಪ್ರಕಾರ, ಪ್ರತಿದಿನ ಆರ್ ಟಿಇ ಹಕ್ಕುಗಳ ಉಲ್ಲಂಘನೆ ಕುರಿತು 8ರಿಂದ 10 ದೂರುಗಳು ಬರುತ್ತಿರುತ್ತದೆ. ಆರ್ ಟಿಇಯಡಿ ದಾಖಲಾದ ಮಕ್ಕಳಿಗೆ ಪ್ರತ್ಯೇಕ ವಿಭಾಗಗಳನ್ನು ಖಾಸಗಿ ಶಾಲೆಗಳು ಮಾಡುತ್ತವೆ ಎಂದು ನಾವು ಹಲವು ದೂರುಗಳನ್ನು ಕೇಳುತ್ತೇವೆ. ಪುಸ್ತಕ ಮತ್ತು ಯೂನಿಫಾರ್ಮ್ ಗಳಿಗೆ ಹಾಗೂ ಮುಂದಿನ ಶೈಕ್ಷಣಿಕ ವರ್ಷಕ್ಕೆ ಶುಲ್ಕ ಪಾವತಿಗೆ ಹಣ ನೀಡಬೇಕೆಂದು ಆರ್ ಟಿಯಡಿ ದಾಖಲಾದ ಮಕ್ಕಳ ಪೋಷಕರನ್ನು ಒತ್ತಾಯಿಸುತ್ತಾರೆ ಎಂದು ನಮಗೆ ದೂರುಗಳು ಬರುತ್ತವೆ ಎನ್ನುತ್ತಾರೆ ಆಯೋಗದ ಅಧ್ಯಕ್ಷೆ ಕೃಪಾ ಆಳ್ವ.
ಆರ್ ಟಿಇ ಕಾರ್ಯಕರ್ತೆ ನಾಗಸಿಂಹ ಜಿ ರಾವ್ ಮಾತನಾಡಿ, ಆರ್ ಟಿಇ ಇಂದು ಶೋಷಣೆಯ ಹಕ್ಕು ಕಾಯ್ದೆ(Right to Exploitation) ಎಂದಾಗಿದೆ. ಕಾಯ್ದೆ ಉಲ್ಲಂಘನೆ ಬಗ್ಗೆ ಖಾಸಗಿ ಶಾಲೆಗಳ ವಿರುದ್ಧ ನೂರಾರು ದೂರುಗಳು ಬಂದರೂ ಸಹ ಸರ್ಕಾರ ಯಾವೊಂದು ಶಾಲೆಯ ನೋಂದಣಿಯನ್ನು ರದ್ದುಪಡಿಸಿರುವ ಉದಾಹರಣೆಯಿಲ್ಲ ಎಂದು ಹೇಳಿದ್ದಾರೆ.
ಹೊಸದೊಂದು ಪ್ರಕರಣದಲ್ಲಿ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಖಾಸಗಿ ಶಾಲೆಯ ಆರ್ ಟಿಇಯಡಿ ದಾಖಲಾದ ಮಕ್ಕಳಿಗೆ ಬೆದರಿಕೆಯೊಡ್ಡಲಾಗುತ್ತಿದೆ ಎಂಬ ದೂರುಗಳು ಬಂದಿವೆ. ಬೇರೆ ಶಾಲೆಗಳಿಗೆ ವರ್ಗಾವಣೆ ಮಾಡಿಕೊಳ್ಳಿ, ಈ ಮಕ್ಕಳ ಸಾಧನೆ ಕಳಪೆಯಾಗಿದೆ ಎಂದು ಶಾಲೆಯ ಆಡಳಿತ ವರ್ಗ ಬೆದರಿಕೆಯೊಡ್ಡುತ್ತಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಈ ಕುರಿತು ಪೋಷಕರೊಬ್ಬರು ಶಿಕ್ಷಣ ಇಲಾಖೆಗೆ ದೂರು ನೀಡಿದ್ದಾರೆ.