ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಶೂಟೌಟ್ ನಡೆದಿದ್ದು, ತಪ್ಪಿಸಿಕೊಳ್ಳುವ ಭರದಲ್ಲಿ ಪೊಲೀಸರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಲು ಪ್ರಯತ್ನಿಸಿದ ರೌಡಿ ಶೀಟರ್ ಪರಮೇಶ್ ಕಾಲಿಗೆ ಪೊಲೀರು ಗುಂಡು ಹಾರಿಸಿದ್ದಾರೆ.
ಬೆಂಗಳೂರಿನ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ತಪ್ಪಿಸಿಕೊಳ್ಳುವ ಭರದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾಗ ರೌಡಿ ಶೀಟರ್ ಮತ್ತು ಆತನ ಸಹಚರನ ಮೇಲೆ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿಶೀಟರ್ ಪರಮೇಶ್ ಮತ್ತು ಆತನ ಸಹಚರನನ್ನು ಬಂಧಿಸಲು ತೆರಳಿದಾಗ ಈ ಘಟನೆ ನಡೆದಿದೆ. ಈ ಬಗ್ಗೆ ಮಾಹಿತಿ ನೀಡಿರುವ ದಕ್ಷಿಣ ವಿಭಾಗದ ಡಿಸಿಪಿ ಶರಣಪ್ಪ ಅವರು, ‘ಶೂಟೌಟ್ನಲ್ಲಿ ರೌಡಿಶೀಟರ್ ಪರಮೇಶ್ ಹಾಗೂ ಅವನ ಸಹಚರ ಸಂತೋಷ್ ಕಾಲಿಗೆ ಗುಂಡು ತಗುಲಿದ್ದು, ಬನಶಂಕರಿಯ ಚಿಕ್ಕೇಗೌಡನ ಪಾಳ್ಯದಲ್ಲಿ ಘಟನೆ ನಡೆದಿದೆ. ಕೊಲೆ ಕೇಸ್ನಲ್ಲಿ ಪರಮೇಶ್ ಬಂಧನಕ್ಕೆ ತಲಘಟ್ಟಪುರ ಪೊಲೀಸರು ತೆರಳಿದ್ದ ವೇಳೆ ಪಿಸ್ತೂಲ್ನಿಂದ ಪೊಲೀಸರ ಮೇಲೆ ಫೈರಿಂಗ್ ಮಾಡಲು ಯತ್ನಿಸಿದ್ದಾರೆ. ಅಲ್ಲದೆ, ಹೆಡ್ ಕಾನ್ಸ್ಟೆಬಲ್ ಸುರೇಶ್, ಪೇದೆ ನೇಮಿನಾಥ್ ಮೇಲೆ ರೌಡಿಶೀಟರ್ಗಳು ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಆತ್ಮರಕ್ಷಣೆಗೆ ರೌಡಿಶೀಟರ್ಗಳ ಮೇಲೆ ಇನ್ಸ್ಪೆಕ್ಟರ್ ಶಿವಸ್ವಾಮಿ, ಎಸ್ಐ ಶಿವಕುಮಾರ್ ಏರ್ ಫೈರ್ ಮಾಡಿದ್ದಾರೆ. ರೌಡಿಶೀಟರ್ಗಳ ಕಾಲಿಗೆ ಗುಂಡು ತಗುಲಿದ್ದು, ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ ಎಂದರು.
ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪರಮೇಶ್ ವಿರುದ್ಧ ಕೊಲೆ ಯತ್ನ,. ಸುಲಿಗೆ ಸೇರಿದಂತೆ ಒಟ್ಟು ಒಂಬತ್ತು ಪ್ರಕರಣಗಳು ಹಾಗೂ ಆತನ ಸಹಚರ ಸಂತೋಷ್ ವಿರುದ್ಧ ನಾಲ್ಕು ಪ್ರಕರಣಗಳು ದಾಖಲಾಗಿದ್ದವು ಎನ್ನಲಾಗಿದೆ.