ರಾಜ್ಯ

ಚುನಾವಣೆ: ಪೋಷಕರು ಮತ ಹಾಕಿದರೆ, ಮಕ್ಕಳಿಗೆ ಮಾರ್ಕ್ಸ್!

Nagaraja AB

ಬೆಂಗಳೂರು: ಪೋಷಕರು ಚುನಾವಣೆಯಲ್ಲಿ ಮತ ಹಾಕಿದ್ದರೆ, ಅವರ ಮಕ್ಕಳಿಗೆ ಎರಡು ಅಂಕ ನೀಡಲಾಗುತ್ತಿದೆ.  ಮತ ಚಲಾಯಿಸಿದ ನಂತರ ಶಾಹಿ ಇಂಕ್ ತೋರಿಸಿ ಸಂಬಂಧಿತ ಶಾಲೆಗಳಿಂದ ಮಕ್ಕಳಿಗೆ ಎರಡು ಅಂಕ ಕೊಡಿಸಬಹುದಾಗಿದೆ.

ಮತದಾನದ ಬಗ್ಗೆ ಮಕ್ಕಳ ಪೋಷಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮೇಲ್ವಿಚಾರಣಾ ಸಂಘ ಈ ರೀತಿಯ ಘೋಷಣೆ ಮಾಡಿದೆ.  ತಂದೆ ತಾಯಿ ಇಬ್ಬರು ಮತ ಚಲಾಯಿಸಿದ್ದರೆ ನಾಲ್ಕು ಅಂಕ ನೀಡುವುದಾಗಿ ತಿಳಿಸಿದೆ.

ಮತ ಚಲಾಯಿಸಿದ ನಂತರ ಪೋಷಕರು ಅಸೋಸಿಯೇಷನ್ ಶಾಲೆಗಳಿಗೆ ತೆರಳಿ ಮತ ಚಲಾಯಿಸಿದ ಬಗ್ಗೆ ಶಾಹಿ ಇಂಕ್ ತೋರಿಸಿ ಅಂಕ ಪಡೆಯಬಹುದು. ಒಂದು ವೇಳೆ ಒಬ್ಬರೇ ಪೋಷಕರು ಮತ ಚಲಾಯಿಸಿದ್ದರೆ ಎರಡು ಅಂಕ ಪಡೆಯುತ್ತಾರೆ. ತಂದೆ ತಾಯಿ ಇಬ್ಬರು ಮತ ಚಲಾಯಿಸಿದ್ದರೆ ನಾಲ್ಕು ಅಂಕ ನೀಡಲಾಗುವುದು ಎಂದು ಅಸೋಸಿಯೇಷನ್ ಹೇಳಿದೆ.

2013ರ ಚುನಾವಣೆ ಸಂದರ್ಭದಲ್ಲಿ ಇದನ್ನು ಪ್ರಥಮ ಬಾರಿಗೆ ಆರಂಭಿಸಲಾಗಿದ್ದು, ನಗರದಲ್ಲಿನ ಒಂದು ಶಾಲೆಗೆ  ಮಾತ್ರ ಸೀಮಿತಗೊಳಿಸಲಾಗಿತ್ತು. ಆದರೆ, ಈ ಬಾರಿ ಇದನ್ನು ವಿಸ್ತರಿಸಲಾಗಿದ್ದು, ಎಲ್ಲಾ ಸದಸ್ಯ ಶಾಲೆಗಳು ಇದನ್ನು ಅನುಸರಿಸುವಂತೆ ಸೂಚಿಸಲಾಗಿದೆ ಎಂದು ಅಸೋಸಿಯೇಷನ್  ಪ್ರಧಾನ ಕಾರ್ಯದರ್ಶಿ ಡಾ. ಶಶಿ ಕುಮಾರ್ ತಿಳಿಸಿದ್ದಾರೆ.

ಮತದಾನ ದಿನ ರಜೆ ಸಿಗುವುದರಿಂದ ಹೊರಗಡೆ ಹೋಗುವ ಪೋಷಕರೇ ಹೆಚ್ಚು. ಅಂತಹ ಪೋಷಕರಲ್ಲಿ ಮತದಾನದ ಮಹತ್ವ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಇಂತಹದ್ದೊಂದು ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಅವರು ಹೇಳಿದ್ದಾರೆ.

2018-19ರ ಅಕಾಡೆಮಿಕ್ ವರ್ಷದಲ್ಲಿ ಉತ್ತೇಜಕ ಅಂಕಗಳನ್ನು ಅಳವಡಿಸಲಾಗಿದೆ. ಪ್ರಾಥಮಿಕ ಪೂರ್ವ ಹಾಗೂ 10 ನೇ ತರಗತಿ ವಿದ್ಯಾರ್ಥಿಗಳಿಗೆ  ಇದು ಅನ್ವಯಿಸುವುದಿಲ್ಲ. ಏಕೆಂದರೆ ಪ್ರಾಥಮಿಕ ಪೂರ್ವ ವಿದ್ಯಾರ್ಥಿಗಳಿಗೆ ಪರೀಕ್ಷೆ ಇರುವುದಿಲ್ಲ ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳು ರಾಜ್ಯಮಟ್ಟದ ಪರೀಕ್ಷೆ ಎದುರಿಸಬೇಕಾಗುತ್ತದೆ.

ಒಂದು ವೇಳೆ  ಅಂತಹ ವಿದ್ಯಾರ್ಥಿಗಳ ಪೋಷಕರನ್ನು ಲಾಟರಿ ಮೂಲಕ ಆಯ್ಕೆ ಮಾಡಿ ಬಹುಮಾನ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

SCROLL FOR NEXT