ಬೆಂಗಳೂರಿನಲ್ಲಿ ಪತ್ತೆಯಾದ ಮತದಾರರ ಗುರುತಿನ ಚೀಟಿಗಳು
ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಜಾಲಹಳ್ಳಿಯ ಫ್ಲಾಂಟ್ ಒಂದರಲ್ಲಿ ಸಿಕ್ಕ ರಾಶಿ ರಾಶಿ ಮತದಾರರ ಗುರುತಿನ ಚೀಟಿ ಪ್ರಕರಣಗಳ ಸಂಬಂಧ ಕಾಂಗ್ರೆಸ್ ಮಾಡುತ್ತಿರುವ ಆರೋಪಗಳನ್ನು ಬಿಜೆಪಿ ನಾಯಕಿ ಮಂಜುಳಾ ನಂಜಮರಿ ಅವರ ಪುತ್ರ ಶ್ರೀಧರ್ ನಂಜಮರಿಯವರು ತಿರಸ್ಕರಿಸಿದ್ದಾರೆ.
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಜಾಲಹಳ್ಳಿಯ ಫ್ಲಾಂಟ್ ಒಂದರಲ್ಲಿ 9,746 ಮತದಾರರ ಗುರುತಿನ ಚೀಟಿಗಳು ಪತ್ತೆಯಾಗಿದ್ದವು. ಈ ಪ್ರಕರಣ ಇದೀಗ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಕೆಸರೆರಚಾಟಕ್ಕೆ ಕಾರಣವಾಗಿದೆ.
ಪ್ರಕರಣ ಸಂಬಂಧ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಪ್ರಕಾಶ್ ಜವಡೇಕರ್ ಅವರು, ಚುನಾವಣೆಯನ್ನು ನಿಗ್ರಹಿಸಲು ಕಾಂಗ್ರೆಸ್ ಯತ್ನ ನಡೆಸುತ್ತಿದೆ ಎಂದಿದ್ದರು.
ಕಾಂಗ್ರೆಸ್ ವಕ್ತಾಕ ರಂದೀಪ್ ಸುರ್ಜೇವಾಲಾ ಅವರು ಮಾತನಾಡಿ, ನಂಜಮುರಿಯವರು 2015ರಲ್ಲಿ ಬಿಜೆಪಿಯಿಂದ ಟಿಕೆಟ್ ಪಡೆದು ಕಾರ್ಪೋರೇಟ್ ಚುನಾವಣೆಯಲ್ಲಿ ಸ್ಪರ್ಧೆ ನಡೆಸಿದ್ದ ತಮ್ಮ ಪುತ್ರ ರಾಕೇಶ್ ಅವರಿಗೆ ಮನೆಯನ್ನು ಬಾಡಿಗೆಗೆ ನೀಡಿದ್ದರು ಎಂದು ಹೇಳಿದ್ದರು.
ಈ ಆರೋಪವನ್ನು ತಿರಸ್ಕರಿಸಿರುವ ಮಂಜುಳಾ ನಂಜಮರಿ ಅವರ ಪುತ್ರ ಶ್ರೀಧರ್ ನಂಜಮರಿಯವರು, ಮಂಜುಳಾ ನಂಜಮರಿಯವರಿಗೆ ನಾನೊಬ್ಬನೇ ಮಗ. ರಾಕೇಶ್ ನನ್ನ ಸಂಬಂಧಿಕರೊಬ್ಬರ ಪುತ್ರ. ಮಾಧ್ಯಮಗಳು ಸುದ್ದಿ ಬಿತ್ತರಿಸುತ್ತಿರುವಂತೆ ಫ್ಲಾಟ್'ಗೂ ಆತನಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ಫ್ಲಾಟ್'ನ್ನು ರಂಗರಾಜು ಎಂಬುವವರಿಗೆ ಬಾಡಿಗೆಗೆ ನೀಡಲಾಗಿತ್ತು. ತಿಂಗಳು, ತಿಂಗಳು ರಂಗರಾಜು ಅವರು ಬಾಡಿಗೆ ಹಣವನ್ನು ನೀಡುತ್ತಿದ್ದರೆಂದು ತಿಳಿಸಿದ್ದಾರೆ.