ಬೆಂಗಳೂರಿನಲ್ಲಿ ಪತ್ತೆಯಾದ ಮತದಾರರ ಗುರುತಿನ ಚೀಟಿಗಳು
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ಬೆಂಗಳೂರಿನ ಒಂದು ಅಪಾರ್ಟ್ ಮೆಂಟ್ ನಲ್ಲಿ 10 ಸಾವಿರಕ್ಕೂ ಅಧಿಕ ವೋಟರ್ ಐಡಿಗಳು ಪತ್ತೆಯಾಗಿವೆ.
ನಗರದ ಪ್ರತಿಷ್ಠಿತ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಮತದಾನ ಮುಂದೂಡಿಕೆಯಾಗುವ ಸಾಧ್ಯತೆ ಗೋಚರವಾಗಿದೆ. ಕ್ಷೇತ್ರದ ವ್ಯಾಪ್ತಿಯಲ್ಲಿ ಮಂಗಳವಾರ 10 ಸಾವಿರಕ್ಕೂ ಅಧಿಕ ಮತದಾರರ ಗುರುತಿನ ಚೀಟಿ ಅಕ್ರಮವಾಗಿ ಪತ್ತೆಯಾಗಿದೆ.
ರಾಜರಾಜೇಶ್ವರಿ ನಗರದ ಜಾಲಹಳ್ಳಿಯ ಅಪಾರ್ಟ್ವೆುಂಟ್ವೊಂದರಲ್ಲಿ ಐದು ಲ್ಯಾಪ್ ಟಾಪ್, ಒಂದು ಪ್ರಿಂಟರ್, ಎರಡು ಟ್ರಂಕ್ ತುಂಬಾ ಮತದಾರಗುರುತಿನ ಚೀಟಿ ಸಿಕ್ಕಿದೆ. ಈ ವಿಚಾರ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆಯೇ ಮತದಾನ ಮುಂದೂಡುವಂತೆ ಬಿಜೆಪಿ ಮತ್ತು ಜೆಡಿಎಸ್ ಪಟ್ಟು ಹಿಡಿದಿವೆ. ಇನ್ನು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವಣಾ ಆಯೋಗ ಈ ಸಂಬಂಧ ದೂರು ನೀಡಿದ್ದು, ತನಿಖೆ ನಡೆಸಲಾಗುತ್ತಿದೆ.
ಇನ್ನು ಮಂಜುಳಾ ನಂಜಾಮರಿ ಎಂಬುವರಿಗೆ ಸೇರಿದ ಫ್ಲ್ಯಾಟ್ ಅನ್ನು ರಾಕೇಶ್ ಎಂಬುವರು ಬಾಡಿಗೆಗೆ ಪಡೆದಿದ್ದಾರೆ ಎಂದು ತಿಳಿದುಬಂದಿದ್ದು, ಇಲ್ಲಿ ಲ್ಯಾಪ್ಟಾಪ್ ಹಾಗೂ ಪ್ರಿಂಟರ್ ಇಟ್ಟು ವೋಟರ್ ಐಡಿಗಳನ್ನು ಸೃಷ್ಟಿಸಲಾಗಿದೆ. ಕಾರ್ಡ್ ಗಳ ಜತೆಗೆ ಮತದಾರರ ಹೆಸರು ಸೇರಿಸುವ ಫಾರಂ 6ರ ಕೌಂಟರ್ ಫೈಲ್ಗಳು ಒಂದು ಲಕ್ಷ ಇತ್ತು ಎಂದು ತಿಳಿದುಬಂದಿದೆ.
ಈ ವಿಷಯ ತಿಳಿಯುತ್ತಿದ್ದಂತೆಯೇ ಅಪಾರ್ಟ್‍ಮೆಂಟ್ ಬಳಿ ಜಮಾಯಿಸಿದ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು, ಹಣದ ಆಮಿಷವೊಡ್ಡಿ ಮತದಾರರಿಂದ ವೋಟರ್ ಐಡಿಗಳನ್ನು ಸಂಗ್ರಹ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು. ಅಲ್ಲದೆ ಸ್ಥಳದಲ್ಲಿ ಪ್ರತಿಭಟನೆ ಕೂಡ ನಡೆಸಿದರು. ಬಳಿಕ ಘಟನಾ ಸ್ಥಳಕ್ಕೆ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ, ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.