ರಾಜ್ಯ

ವಿಧಾನಸಭೆ ಚುನಾವಣೆ: ಬಹಿರಂಗ ಪ್ರಚಾರಕ್ಕೆ ತೆರೆ, ಜಾಹೀರಾತಿಗೂ ತಡೆ

Lingaraj Badiger
ಬೆಂಗಳೂರು: ದೇಶಾದ್ಯಂತ ತೀವ್ರ ಕುತೂಹಲ ಮೂಡಿಸಿರುವ, ಅಕ್ಷರಸಹಃ ರಾಜಕೀಯ ಕುರುಕ್ಷೇತ್ರವಾಗಿ ಮಾರ್ಪಪಟ್ಟಿರುವ ಕರ್ನಾಟಕ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಗುರುವಾರ ಸಂಜೆ ತೆರೆ ಬಿದ್ದಿದೆ.
ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಮೂರು ರಾಜಕೀಯ ಪಕ್ಷಗಳು ಕೊನೆ ಕ್ಷಣದವರೆಗೂ ಬಿರುಸಿನ ಪ್ರಚಾರ ನಡೆಸಿದರು. ಮತದಾರರ ಮನ ಗೆಲ್ಲಲು ನಾಳೆ ಮನೆ ಮನೆ ಪ್ರಚಾರ ನಡೆಸಲಿದ್ದಾರೆ.
ಇಂದು ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದ ಹಿನ್ನೆಲೆಯಲ್ಲಿ ಸಂಜೆ 6 ಗಂಟೆಯ ನಂತರ ದೃಶ್ಯ ಮಾಧ್ಯಮಗಳಲ್ಲಿ ಚುನಾವಣೆಗೆ ಸಂಬಂಧಿಸಿದ ಜಾಹೀರಾತುಗಳನ್ನು ಪ್ರಸಾರ ಮಾಡುವಂತಿಲ್ಲ ಮತ್ತು ಮುದ್ರಣ ಮಾಧ್ಯಮಗಳು ಒಪ್ಪಿಗೆ ಪಡೆದು ಪ್ರಕಟಿಸಬೇಕು. ಕೇಂದ್ರ ಚುನಾವಣಾ ಆಯೋಗವು ಸಾಮಾಜಿಕ ಜಾಲತಾಣಗಳು ಮತ್ತು ಸಾಮಾಜಿಕ ಮಾಧ್ಯಮಗಳನ್ನು ವಿದ್ಯುನ್ಮಾನ ಮಾಧ್ಯಮಗಳೆಂದು ಪರಿಗಣಿಸಿದೆ. ಅವುಗಳಿಗೂ ನಿರ್ಬಂಧ ಅನ್ವಯವಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಸ್‌. ಸಸಿಕಾಂತ್ ಸೆಂಥಿಲ್ ಅವರು ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಚುನಾವಣೆಯ ಮೇಲೆ ಪ್ರಭಾವ ಬೀರುವಂತಹ ಸಂದೇಶಗಳನ್ನು ಪ್ರಸಾರ ಮಾಡುವುದನ್ನು ನಿಷೇಧಿಸಿದಲಾಗಿದೆ. ಒಂದು ವೇಳೆ ನಿಯಮ ಮೀರಿ ವರ್ತಿಸಿದರೆ ಅವರ ವಿರುದ್ಧ ಪ್ರಕರಣ ದಾಖಲು ಮಾಡಲಾಗುವುದು ಎಂದು ಸೆಂಥಿಲ್ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ವಿಧಾನಸಭೆಯ 223 ಕ್ಷೇತ್ರಗಳಿಗೆ ಮೇ 12ರಂದು ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದ್ದು, ಒಟ್ಚು 2,655 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
2.52 ಕೋಟಿ ಪುರುಷರು ಹಾಗೂ 2.44 ಕೋಟಿ ಮಹಿಳೆಯರು ಸೇರಿದಂತೆ ಒಟ್ಟು 4.96 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
SCROLL FOR NEXT