ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಜಾಲಹಳ್ಳಿಯ ಅಪಾರ್ಟ್ವೆುಂಟ್ವೊಂದರಲ್ಲಿ ಪತ್ತೆಯಾದ 10 ಸಾವಿರ ಮತದಾರರ ಗುರುತಿನ ಚೀಟಿಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗ ಕೇಂದ್ರ ಚುನಾವಣಾ ಆಯೋಗಕ್ಕೆ ತನ್ನ ವರದಿ ರವಾನೆ ಮಾಡಿದೆ.
ಆರ್ ಆರ್ ನಗರದಲ್ಲಿ ಸಾವಿರಾರು ವೋಟರ್ ಐಡಿ ಪತ್ತೆಯಾದ ಹಿನ್ನೆಲೆಯಲ್ಲಿ ಈ ಕ್ಷೇತ್ರದಲ್ಲಿ ಚುನಾವಣೆ ನಡೆಯುವುದೋ ಇಲ್ಲವೋ ಎಂಬ ಆತಂಕ ಮನೆ ಮಾಡಿದ್ದು, ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗ ನಿರ್ಧಾರ ಕೈಗೊಳ್ಳಲಿದೆ. ಈ ನಡುವೆ, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಕೆಸರೆರಚಾಟ ನಡೆದಿರುವಂತೆಯೇ, ಪ್ರಕರಣದ ಕುರಿತು ಉಪ ಆಯುಕ್ತರಿಂದ ತನಿಖೆ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ.
ಏತನ್ಮಧ್ಯೆ ಪ್ರಕರಣದಲ್ಲಿ ಅಧಿಕಾರಿಗಳ ಪಾತ್ರವಿದೆ. ಅಪಾರ್ಟ್ವೆುಂಟ್ನಲ್ಲಿ ಸಿಕ್ಕ 9,896 ಮತದಾರರ ಗುರುತಿನ ಚೀಟಿಗಳು ನಕಲಿ ಅಲ್ಲ. ಚುನಾವಣಾ ಆಯೋಗದ ಸಾಫ್ಟ್ವೇರ್ ದುರ್ಬಳಕೆ ಮಾಡಿಕೊಂಡು ಈ ಗುರುತಿನ ಚೀಟಿ ತಯಾರಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿತ್ತು. ಈ ಕುರಿತು ಸ್ಪಷ್ಟನೆ ನೀಡಿರುವ ರಾಜ್ಯ ಚುನಾವಣಾ ಆಯೋಗದ ಮುಖ್ಯಾಧಿಕಾರಿ ಸಂಜೀವ್ ಕುಮಾರ್ ಅವರು, ಈ ಎಲ್ಲ ಆರೋಪಗಳು ನಿರಾಧಾರ. ಇದರಲ್ಲಿ ಅಧಿಕಾರಿಗಳ ಯಾವ ಪಾತ್ರವೂ ಕಂಡುಬಂದಿಲ್ಲ ಎಂದು ಹೇಳಿದ್ದಾರೆ.
ಪ್ರಕರಣ ಸಂಬಂಧ ಮೇಲ್ನೋಟಕ್ಕೆ ಕಂಡು ಬಂದ ಅಂಶ ಉಲ್ಲೇಖಿಸಿ ಸಿದ್ಧಪಡಿಸಲಾದ ವರದಿಯನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಕಳುಹಿಸಲಾಗಿದೆ. ಉಪ ಆಯುಕ್ತರು ಶೀಘ್ರ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ. ಅಲ್ಲದೆ ಈ ಸಂಬಂಧ ಪೊಲೀಸ್, ವೆಚ್ಚ ಹಾಗೂ ಸಾಮಾನ್ಯ ವೀಕ್ಷಕರನ್ನು ಒಳಗೊಂಡ ಮೂವರು ಅಧಿಕಾರಿಗಳ ತಂಡ ತನಿಖೆ ಆರಂಭಿಸಿದ್ದು, ತನಿಖೆ ಪ್ರಗತಿಯಲ್ಲಿದೆ. ಎಂದು ಸಂಜೀವ್ ಕುಮಾರ್ ಹೇಳಿದ್ದಾರೆ.