ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಶನಿವಾರ ಮತದಾನ ನಡೆಯುತ್ತಿರುವ ಹಿನ್ನಲೆಯಲ್ಲಿ ರಾಜಕೀಯ ಪಕ್ಷ ಅಥವಾ ರಾಜಕೀಯ ವ್ಯಕ್ತಿ, ಅಭ್ಯರ್ಥಿಗಳ ಕುರಿತ ರಹಸ್ಯ ಕಾರ್ಯಾಚರಣೆಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡದಂತೆ ರಾಜ್ಯ ಚುನಾವಣಾ ಆಯೋಗ ಮಾಧ್ಯಮಗಳಿಗೆ ಸೂಚನೆ ನೀಡಿದೆ.
ನಾಳೆ ರಾಜ್ಯಾದ್ಯಂತ ಮತದಾನ ನಡೆಯುವ ಹಿನ್ನಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ಮಾಧ್ಯಮಗಳಿಗೆ ಇಂತಹುದೊಂದು ಸೂಚನೆ ನೀಡಿದ್ದು, ಪ್ರಮುಖವಾಗಿ ಬಿಜೆಪಿ ಅಭ್ಯರ್ಥಿ ಬಿ ಶ್ರೀರಾಮುಲು ಅವರ ಕುರಿತಾದ ವಿಡಿಯೋವನ್ನು ಪ್ರಸಾರ ಮಾಡದಂತೆ ಎಚ್ಚರಿಕೆ ನೀಡಿದೆ. ಈ ಬಗ್ಗೆ ಎಲ್ಲ ಸುದ್ದಿವಾಹಿನಿಗಳು ಮತ್ತು ಸುದ್ದಿಸಂಸ್ಥೆಗಳಿಗೆ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದ್ದು ಮತದಾನಕ್ಕೂ 24ಗಂಟೆಗಳಿಗೂ ಮುನ್ನ ಯಾವುದೇ ರೀತಿಯ ಕುಟುಕು ಕಾರ್ಯಾಚರಣೆ ಅಥವಾ ರಹಸ್ಯ ಕಾರ್ಯಾಚರಣೆಗಳ ವಿಡಿಯೋ ಪ್ರಸಾರ ಮಾಡದಂತೆ ಸೂಚನೆ ನೀಡಿದೆ.
ಅಕ್ರಮ ಗಣಿಗಾರಿಕೆ ಆರೋಪಕ್ಕೆ ಸಂಬಂಧಿಸಿದಂತೆ ಶ್ರೀರಾಮುಲು ಅವರು ಜನಾರ್ಧನ ರೆಡ್ಡಿ ಪರ ತೀರ್ಪು ನೀಡುವಂತೆ ನಿವೃತ್ತಿ ಮುಖ್ಯ ನ್ಯಾಯಮೂರ್ತಿವೊಬ್ಬರ ಸಂಬಂಧಿಗೆ ಲಂಚ ನೀಡುತ್ತಿರುವ ಕುರಿತು ವರದಿ ಪ್ರಸಾರವಾಗಿತ್ತು, ಅಲ್ಲದೆ ಈ ಕುರಿತ ವಿಡಿಯೋ ಕೂಡ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ರಾಜ್ಯ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರೂ ಕೂಡ ಸುದ್ದಿಗೋಷ್ಠಿ ನಡೆಸಿ, ಸ್ಫೋಟಕ ಸುದ್ದಿ ಎಂದು ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದ್ದ ಶ್ರೀರಾಮುಲು ಅವರ ವಿಡಿಯೋವನ್ನು ಬಿಡುಗಡೆ ಮಾಡಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಕಾಂಗ್ರೆಸ್ ಪಕ್ಷ ಜನಾರ್ಧನ ರೆಡ್ಡಿಯನ್ನು ಗಣಿ ಕುಣಿಕೆಯಿಂದ ತಪ್ಪಿಸಲು ಬಿಜೆಪಿ ಪಕ್ಷ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿತ್ತು. ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಿಜೆಐ ಅಳಿಯ ಮತ್ತು ಶ್ರೀರಾಮುಲು, ರೆಡ್ಡಿ ಸಹೋದರರು ಮಾತನಾಡುತ್ತಿರುವ ವಿಡಿಯೋವನ್ನು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಟ್ವಿಟರ್ ನಲ್ಲಿ ಬಿಡುಗಡೆ ಮಾಡಿದ್ದಾರೆ.
ಇಷ್ಟೆಲ್ಲ ವಿವಾದಗಳ ನಡುವೆಯೂ ಮೊಳಕಾಲ್ಮೂರು ಮತ್ತು ಬಾದಾಮಿ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿ ಬಿ ಶ್ರೀರಾಮುಲು ಅವರು ಮಾತ್ರ ಎರಡೂ ಕ್ಷೇತ್ರಗಳಲ್ಲಿ ಜನ ತಮಗೆ ಆಶೀರ್ವದಿಸುತ್ತಾರೆ. ಎರಡೂ ಕ್ಷೇತ್ರಗಳಲ್ಲೂ ನಾನು ಗೆದ್ದೇ ಗೆಲ್ಲುತ್ತೇನೆ ಎಂದು ವಿಶ್ವಾಸದಲ್ಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics