ಬೆಂಗಳೂರು: ಹಾಲಿ ಕರ್ನಾಟಕ ವಿಧಾನಸಭೆ ಚುನಾವಣೆ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿತ್ತಾದರೂ, ರಾಜ್ಯದ ಹಲವೆಡೆ ಕನಿಷ್ಟ ಪ್ರಮಾಣದ ಮತದಾನವಾಗಿದೆ.
ಪ್ರಮುಖವಾಗಿ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕೇವಲ ಶೇ.54.76ರಷ್ಟು ಮತದಾನವಾಗಿದ್ದು, ಮತದಾನಕ್ಕೆ ಬೆಂಗಳೂರಿಗರ ನಿರ್ಲಕ್ಷ್ಯವೇ ಅಥವಾ ಮತದಾನ ಮಾಡಲು ಸೂಕ್ತ ಅವಕಾಶ ಸಿಗುತ್ತಿಲ್ಲವೇ ಎಂಬ ಮಾತು ಕೇಳಿಬರುತ್ತಿವೆ. ಆಧಾರ್ ನೆರವಿನಿಂದ ಮತದಾನವನ್ನು ಕಂಪ್ಯೂಟರೀಕರಣ ಮಾಡಿದರೆ ಮತದಾನದ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಇದೆ.
ಉದಾಹರಣೆಗೆ, ರಾಜ್ಯದ ಯಾವುದೇ ಮೂಲೆಯ ವ್ಯಕ್ತಿ ತನಗೆ ಸಂಬಂಧಿಸಿದ ಕ್ಷೇತ್ರಕ್ಕೆ ತಾನಿದ್ದ ಸ್ಥಳದಿಂದಲೇ ಮತದಾನ ಮಾಡುವ ಕಂಪ್ಯೂಟರೀಕೃತ ಮತದಾನ ಮಾಡುವುದು. ಅಂದರೆ ಬೆಂಗಳೂರಿನಲ್ಲಿ ವಾಸಿಸುವ ಮಂಗಳೂರು ಮೂಲದ ವ್ಯಕ್ತಿ ತನಗೆ ಸಮೀಪದ ಮತಗಟ್ಟೆಯಲ್ಲೇ ಮಂಗಳೂರು ಕ್ಷೇತ್ರದ ಅಭ್ಯರ್ಥಿಗೆ ಪರ ಅಥವಾ ವಿರೋಧವಾಗಿ ಮತದಾನ ಮಾಡುವುದು. ಇದರಿಂದ ಬಹುಶಃ ಮತದಾನ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಇದೆ.
ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಕಾಥ್ಯಾಯಿನಿ ಚಾಮರಾಜ್ ಎನ್ನುವವರು, ಇಂತಹ ಪರಿಕಲ್ಪನೆ ತುಂಬಾ ಚೆನ್ನಾಗಿದೆ. ಬಹುಶಃ ಭವಿಷ್ಯದಲ್ಲಿ ಈ ವ್ಯವಸ್ಥೆ ಬಂದರೂ ಬರಬಹುದು. ಆರಂಭದಲ್ಲಿ ಇದನ್ನು ರಕ್ಷಣಾ ಭದ್ರತಾ ಸಿಬ್ಬಂದಿಗಳು ಮತ್ತು ಅನಿವಾಸಿ ಭಾರತೀಯರಲ್ಲಿ ಪ್ರಯೋಗ ಮಾಡಬೇಕು. ಅಲ್ಲಿ ಯಶಸ್ಸು ಸಾಧಿಸಿದ ಬಳಿಕ ಅದನ್ನು ರಾಜ್ಯದಲ್ಲಿ ಮುಂದುವರಿಕೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಕಂಪ್ಯೂಟರೀಕೃತ ಮತದಾನದಿಂದ ವಲಸಿಗರಿಗೆ ನೆರವಾಗುತ್ತದೆ. ಆಧಾರ್ ಐಡಿಯನ್ನು ಲಿಂಕ್ ಮಾಡುವುದರಿಂದ ಮತದಾನ ಪ್ರಕ್ರಿಯೆ ಸುಲಭವಾಗುತ್ತದೆ. ಅಲ್ಲದೆ ಮತದಾರರ ಪಟ್ಟಿಯಲ್ಲಿ ಹೆಸರು ನಾಪತ್ತೆಯಂತಹ ಪ್ರಕರಣಗಳು ಕಡಿಮೆಯಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಹಿರಿಯ ವಕೀಲ ಉದಯ್ ಹೊಳ್ಳ ಅವರು, ನಿಜಕ್ಕೂ ಈ ಉಪಾಯ ಉತ್ತಮವಾಗಿದೆ. ಆದರೆ ಅಂತೆಯೇ ಇದರಿಂದ ಅನಾನುಕೂಲವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಅಂತೆಯೇ ಮತದಾರರು ತಮ್ಮ ಕ್ಷೇತ್ರದಲ್ಲೇ ಮತದಾನ ಮಾಡುವುದರಿಂದ ಅವರಿಗೆ ತಮ್ಮ ಕ್ಷೇತ್ರದ ಅಭ್ಯರ್ಥಿಗಳ ಕುರಿತು ಮಾಹಿತಿ ಅರಿಯಲು ನೆರವಾಗುತ್ತದೆ. ಆದರೆ ಅವರು ಬೇರೆ ಪ್ರದೇಶದಿಂದ ಮತದಾನ ಮಾಡಿದರೆ ಅವರಿಗೆ ಅಭ್ಯರ್ಥಿಗಳ ಪರಿಚಯವೇ ಇರುವುದಿಲ್ಲ. ಹಾಗಾದಾಗ ಮತದಾನದ ಆಶಯಕ್ಕೆ ಪೆಟ್ಟು ಬೀಳುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics