ರಾಜ್ಯ

ಕಾಂಗ್ರೆಸ್-ಜೆಡಿಎಸ್ ಸಮಿಶ್ರ ಸರ್ಕಾರಕ್ಕೆ ಸಮನ್ವಯ ಸಮಿತಿ ರಚನೆ

Srinivasamurthy VN
ಬೆಂಗಳೂರು: ಕರ್ನಾಟಕದ ನೂತನ 'ಜೆಡಿಎಸ್‌-ಕಾಂಗ್ರೆಸ್‌' ಸಮ್ಮಿಶ್ರ ಸರ್ಕಾರ ಸುಗಮವಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಲು ಸಮನ್ವಯ ಸಮಿತಿ ರಚಿಸಲಾಗುವುದು ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಶನಿವಾರ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಆಹ್ವಾನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಸುಭದ್ರವಾಗಿರುವಂತೆ ನೋಡಿಕೊಳ್ಳುವುದರೊಂದಿಗೆ ಅವಧಿ ಪೂರ್ಣಗೊಳಿಸಲು ಮತ್ತು ಯಾವ ರೀತಿ ಸರ್ಕಾರ ಕಾರ್ಯವೈಖರಿ ಇರಬೇಕು ಎಂಬುದನ್ನು ಈ ಸಮನ್ವಯ ಸಮಿತಿ ತೀರ್ಮಾನಿಸಲಿದೆ. ಕಾಂಗ್ರೆಸ್‌ ನಾಯಕರೊಂದಿಗೆ ಚರ್ಚಿಸಿ ಸಮನ್ವಯ ಸಮಿತಿ ರಚಿಸಲಾಗುವುದು ಎಂದು ಹೇಳಿದರು.
ಜೆಡಿಎಸ್‌-ಕಾಂಗ್ರೆಸ್‌ ಸರ್ಕಾರ ರಚನೆಯಾದ ಮೇಲೂ ಬಿಜೆಪಿ ಆಪರೇಷನ್  ಮೂಲಕ ಸರ್ಕಾರವನ್ನು ಅಸ್ಥಿರಗೊಳಿಸಲು ಅಥವಾ ವಿಶ್ವಾಸಮತ ಸಾಬೀತುಪಡಿಸದಂತೆ ಅಡ್ಡಿಪಡಿಸಲು ಪ್ರಯತ್ನಿಸಲಿದೆ. ಆದರೆ, ಅವರ ಆಟ ನಡೆಯುವುದಿಲ್ಲ. ನಮಗೆ ಬಿಜೆಪಿ ಬಳಸುವ ಐಟಿ, ಇಡಿ ಅಸ್ತ್ರಗಳ ಬಗ್ಗೆ ಯಾವುದೇ ಭಯವಿಲ್ಲ. ಅದಕ್ಕೆಲ್ಲ ಹೇಗೆ ಅಂತ್ಯ ಕಾಣಿಸಬೇಕು ಎಂಬುದು ಗೊತ್ತಿದೆ ಎಂದು ಎಂದು ಕುಮಾರಸ್ವಾಮಿ ಹೇಳಿದರು.
ಸಮನ್ವಯ ಸಮಿತಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಅಧ್ಯಕ್ಷ
ಮೂಲಗಳ ಪ್ರಕಾರ ಈ ಸಮನ್ವಯ ಸಮಿತಿಗೆ ಸಿದ್ದರಾಮಯ್ಯ ಅಧ್ಯಕ್ಷರಾಗಿರಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಭಾವಿ ಸರ್ಕಾರದಲ್ಲಿ ಇಬ್ಬರು ಉಪ ಮುಖ್ಯಮಂತ್ರಿ ಸ್ಥಾನ ಸೃಷ್ಟಿಯಾಗುವ ಸಾಧ್ಯತೆ ಇದ್ದು, ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಮತ್ತು ಡಿಕೆ ಶಿವಕುಮಾರ್ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮುಖ್ಯಮಂತ್ರಿ ಪಟ್ಟದ ಜೊತೆಗೆ 14 ಸಚಿವ ಸ್ಥಾನಗಳಿಗೆ ಜೆಡಿಎಸ್‌, ಒಂದು ಉಪ ಮುಖ್ಯಮಂತ್ರಿ ಸ್ಥಾನ ಸೇರಿ 20 ಸಚಿವ ಸ್ಥಾನ ಕಾಂಗ್ರೆಸ್‌ ಹಂಚಿಕೊಳ್ಳುವ ಬಗ್ಗೆ ಮಾತುಕತೆ ನಡೆದಿದೆ. ಈ ಮಧ್ಯೆ, ಎರಡು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವಂತೆ ಕಾಂಗ್ರೆಸ್‌ ಒತ್ತಡ ‌ಹೇರುತ್ತಿದೆ ಎಂದೂ ಹೇಳಲಾಗಿದೆ.
ಇನ್ನು ಐದು ವರ್ಷ ಕುಮಾರಸ್ವಾಮಿಯೇ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು. ಅದಕ್ಕಾಗಿ ಪ್ರಭಾವಿ ಸಚಿವ ಸ್ಥಾನಗಳ ಹಂಚಿಕೆ ವಿಷಯದಲ್ಲಿ ರಾಜಿ ಮಾಡಿಕೊಳ್ಳಲು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಮುಂದಾಗಿದ್ದಾರೆ. ಆದರೆ, ಎರಡೂವರೆ ವರ್ಷ ಅಧಿಕಾರ ಹಂಚಿಕೆಯಾಗಬೇಕು ಎಂಬ ಬೇಡಿಕೆ ಮಂಡಿಸಲು ಕಾಂಗ್ರೆಸ್‌ ಸಿದ್ಧತೆ ನಡೆಸಿದೆ. ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಮತ್ತು ದೇವೇಗೌಡ ಈ ಬಗ್ಗೆ ಅಂತಿಮ ತೀರ್ಮಾನಕ್ಕೆ ಬರಲಿದ್ದಾರೆ ಎಂದೂ ಗೊತ್ತಾಗಿದೆ. ಜೆಡಿಎಸ್‌ ಮತ್ತು ಕಾಂಗ್ರೆಸ್‌ ಚುನಾವಣೆ ಸಂದರ್ಭದಲ್ಲಿ ಹೊರಡಿಸಿದ್ದ ‘ಪ್ರಣಾಳಿಕೆ’ಯಲ್ಲಿರುವ ಅಂಶಗಳನ್ನು ಒಗ್ಗೂಡಿಸಿ ಎರಡೂ ಪಕ್ಷಗಳಿಗೆ ಒಪ್ಪಿಗೆಯಾಗುವ ‘ಸಾಮಾನ್ಯ ಕನಿಷ್ಠ ಕಾರ್ಯಕ್ರಮ’ಗಳನ್ನು ಅನುಷ್ಠಾನಗೊಳಿಸುವ ಬಗ್ಗೆಯೂ ಚರ್ಚೆ ನಡೆದಿದೆ.
SCROLL FOR NEXT