ರಾಜ್ಯ

ಹಾವೇರಿ, ಕೊಡಗು ಜಿಲ್ಲೆಗಳಲ್ಲಿ ಅವ್ಯಾಹತ ಅಕ್ರಮ ಮರಳು ಗಣಿಗಾರಿಕೆ: ಲೋಕಾಯುಕ್ತ ತನಿಖೆಯಲ್ಲಿ ಬಹಿರಂಗ

Sumana Upadhyaya

ಬೆಂಗಳೂರು: ಹಾವೇರಿಯ ಜಿಲ್ಲೆಯ ಉಪ ಆಯುಕ್ತರು ಮತ್ತು ಕೊಡಗು ಜಿಲ್ಲೆಯ ಸಹಾಯಕ ಆಯುಕ್ತರ ನೇತೃತ್ವದ ಮರಳು ನಿಯಂತ್ರಣ ಸಮಿತಿ ತಮ್ಮ ಜಿಲ್ಲೆಗಳಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆಯನ್ನು ತಡೆಯುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ನಡೆಸಿದ ತನಿಖೆಯಿಂದ ತಿಳಿದುಬಂದಿದೆ.

ಅಕ್ರಮ ಮರಳುಗಾರಿಕೆ ತಡೆಯುವ ವೈಫಲ್ಯದಿಂದ ಈ ಜಿಲ್ಲೆಗಳಲ್ಲಿ ಅವ್ಯಾಹತವಾಗಿ ನೈಸರ್ಗಿಕ ಸಂಪನ್ಮೂಲವನ್ನು ಲೂಟಿ ಮಾಡಲಾಗುತ್ತಿದ್ದು ರಾಜ್ಯ ಸರ್ಕಾರದ ಖಜಾನೆಗೆ ಭಾರೀ ನಷ್ಟವಾಗುತ್ತಿದೆ.

ತನಿಖಾ ಸಮಿತಿಯ ವರದಿಯ ಪ್ರತಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಲಭ್ಯವಾಗಿದೆ. ಹಾವೇರಿ ಜಿಲ್ಲೆಯ ತುಂಗಭದ್ರಾ ನದಿ ದಂಡೆ ಮತ್ತು ಕೊಡಗು ಜಿಲ್ಲೆಯ ಲಕ್ಷ್ಮಣತೀರ್ಥ ನದಿ ದಂಡೆಯಿಂದ ಅವ್ಯಾಹತವಾಗಿ ಮರಳನ್ನು ತೆಗೆದು ಸಾಗಾಣಿಕೆ ಮಾಡಲಾಗುತ್ತಿದೆ, ಆದರೆ ಇವೆಲ್ಲವನ್ನೂ ಮೂಕಪ್ರೇಕ್ಷಕರಂತೆ ಅಧಿಕಾರಿಗಳು ನೋಡುತ್ತಾ ಸುಮ್ಮನೆ ಕುಳಿತಿದ್ದಾರೆ. ಸ್ಥಳೀಯ ಪೊಲೀಸರು ಕೂಡ ಇವುಗಳೆಲ್ಲವನ್ನು ನೋಡುತ್ತಾ ಸುಮ್ಮನೆ ಕುಳಿತಿದ್ದಾರೆ ಎಂದು ವರದಿ ಹೇಳುತ್ತದೆ.

ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ್ ಶೆಟ್ಟಿ ಆದೇಶದಂತೆ, ಕರ್ನಾಟಕ ಲೋಕಾಯುಕ್ತದ ಪೊಲೀಸ್ ಸೂಪರಿಂಟೆಂಡೆಂಟ್ ಹಾವೇರಿ ಮತ್ತು ಕೊಡಗು ಜಿಲ್ಲೆಗಳಲ್ಲಿ ತನಿಖೆ ನಡೆಸಿದ್ದಾರೆ. ಸಹಾಯಕ ರಿಜಿಸ್ಟ್ರಾರ್ ನಿಂದ ವರದಿ ಸ್ವೀಕರಿಸಿದ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ, ಎರಡೂ ಜಿಲ್ಲೆಗಳ ಕೇಸುಗಳಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ತನಿಖೆ ನಡೆಸಬೇಕಾದ ಅಗತ್ಯವಿದೆ. ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಗಟ್ಟಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಂಡು ಕಾನೂನಿನ ಪ್ರಕಾರ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ.

ಅಧಿಕಾರಿಗಳು ತೆಗೆದುಕೊಂಡ ಕ್ರಮಗಳ ಬಗ್ಗೆ ಮೂರು ವಾರಗಳೊಳಗೆ ಮಧ್ಯಂತರ ವರದಿ ಸಲ್ಲಿಸುವಂತೆ ಲೋಕಾಯುಕ್ತ ನ್ಯಾಯಮೂರ್ತಿಗಳು ಹಾವೇರಿ ಮತ್ತು ಕೊಡಗು ಜಿಲ್ಲೆಗಳ ಉಪ ಆಯುಕ್ತರಿಗೆ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

ಲೋಕಾಯುಕ್ತ ನ್ಯಾಯಮೂರ್ತಿಗಳು ಈ ಸಂಬಂಧ ಎರಡೂ ಜಿಲ್ಲೆಗಳ ಎಸ್ಪಿ, ಹಿರಿಯ ಭೂಗರ್ಭ ವಿಜ್ಞಾನಿಗಳು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಗಳು,ಗಣಿ ಮತ್ತು ಭೂವಿಜ್ಞಾನದ ನಿರ್ದೇಶಕರಿಗೆ ನೊಟೀಸ್ ಕಳುಹಿಸಿದ್ದಾರೆ.

SCROLL FOR NEXT