ಬೆಂಗಳೂರು; ಕಾಂಗ್ರೆಸ್-ಜೆಡಿಎಸ್ ಪಾಳಯದಲ್ಲಿ ಸಚಿವ ಸ್ಥಾನಗಳ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳ ಪಟ್ಟಿ ದಿನದಿಂದ ದಿನಕ್ಕೆ ದೊಡ್ಡದಾಗುತ್ತಲೇ ಇದ್ದು, ಈ ಹಿನ್ನಲೆಯಲ್ಲಿ ಸಚಿವ ಸಂಪುಟ ರಚನೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಇಂದು ಮಧ್ಯಾಹ್ನ ಆರಂಭವಾಗಲಿರುವ ವಿಧಾನಸಭೆಯ ಒಂದು ದಿನದ ವಿಶೇಷ ಅಧಿವೇಶನದಲ್ಲಿ ಮೊದಲಿಗೆ ಸ್ಪೀಕರ್ ಆಯ್ಕೆ ನಡೆಯಲಿದೆ. ನಂತರ ಕುಮಾರಸ್ವಾಮಿ ತಮ್ಮ ಸರ್ಕಾರದ ಪರವಾಗಿ ವಿಶ್ವಾಸಮತಯಾಚನೆಯ ಪ್ರಸ್ತಾವನೆ ಮಂಡಿಸಲಿದ್ದಾರೆ. ಅಲ್ಲಿಗೆ ಸಮ್ಮಿಶ್ರ ಸರ್ಕಾರ ರಚನೆ ಪ್ರಮುಖ ಘಟ್ಟ ಮುಗಿದಂತಾಗುತ್ತದೆ. ನಂತರ ಇನ್ನೊಂದು ಪ್ರಮುಖ ಘಟ್ಟ ಆರಂಭವಾಗಲಿದೆ.
ಉಭಯ ಪಕ್ಷಗಳ ನಡುವಿನ ಅಧಿಕಾರ ಹಂಚಿಕೆ ಸೂತ್ರದ ಅನುಸಾರ ಜೆಡಿಎಸ್'ಗೆ ಮುಖ್ಯಮಂತ್ರಿ ಸೇರಿ 12 ಸಚಿವ ಸ್ಥಾನ ಮತ್ತು ಕಾಂಗ್ರೆಸ್'ಗೆ ಉಪ ಮುಖ್ಯಮಂತ್ರಿ ಸೇರಿದಂತೆ 22 ಸಚಿವ ಸ್ಥಾನಗಳು ಲಭಿಸಲಿವೆ.
ಕಾಂಗ್ರೆಸ್ ಪಾಳಯದಲ್ಲಿ ಸಚಿವ ಸ್ಥಾನಕ್ಕೆ ತೀವ್ರ ಪೈಪೋಟಿಗಳು ಎದುರಾಗಿದ್ದು, ಈ ಹಿನ್ನಲೆಯಲ್ಲಿ ಯಾರಿಗೆ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಹೈಕಮಾಂಡ್ ನೊಂದಿಗೆ ಚರ್ಚೆನಡೆಸಲು ವಿಶ್ವಾಸಮತಯಾಚನೆ ಪೂರ್ಣಗೊಂಡ ಬಳಿಕ ಕಾಂಗ್ರೆಸ್ ನಾಯಕರು ಶುಕ್ರವಾ ರಾತ್ರಿ ಅಥವಾ ಶನಿವಾರ ಬೆಳಿಗ್ಗೆ ದೆಹಲಿಗೆ ತೆರಳುವ ಸಾಧ್ಯತೆಗಳಿವೆ ಎಂದು ಮೂಲಗಳು ಮಾಹಿತಿ ನೀಡಿವೆ.
ಶನಿವಾರ ದೆಹಲಿಯಲ್ಲಿ ಗುಲಾಂ ನಬಿ ಆಜಾದ್, ವೇಣುಗೋಪಾಲ್ ಮೊದಲಾದ ನಾಯಕರ ಜೊತೆಗೆ ಚರ್ಚಿಸಿ ಸಂಪುಟ ಸೇರ್ಪಡೆಯಾಗಬೇಕಾದವರ ಪಟ್ಟಿ ಸಿದ್ಧಪಡಿಸಲಿದ್ದಾರೆ. ಅನಂತರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ಈ ಪಟ್ಟಿಗೆ ಒಪ್ಪಿಗೆ ಪಡೆಯಲಿದ್ದಾರೆ.
ವಾಸ್ತವವಾಗಿ ಕಾಂಗ್ರೆಸ್ ಹೈ ಕಮಾಂಡ್ ಸಂಪುಟ ಸೇರ್ಪಡೆ ವಿಚಾರವನ್ನು ರಾಜ್ಯ ಉಸ್ತುವಾರಿ ವೇಣಿ ಗೋಪಾಲ್ ಹಾಗೂ ರಾಜ್ಯ ನಾಯಕರೇ ತೀರ್ಮಾನಿಸುವಂತೆ ಸೂಚಿಸಿತ್ತು. ಆದರೆ, ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗುತ್ತಿದ್ದಂತೆಯೇ ರಾಜ್ಯದ ಮಟ್ಟದಲ್ಲಿಯೇ ಸಚಿನ ಸ್ಥಾನಗಳನ್ನು ನಿರ್ಧರಿಸಿದರೆ, ಅಸಮಾಧಾನಕ್ಕೆ ಕಾರಣವಾಗಬಹುದು ಎಂಬ ಕಾರಣಕ್ಕೆ ರಾಜ್ಯ ನಾಯಕರು ದೆಹಲಿಗೆ ತೆರಳಲು ನಿರ್ಧರಿಸಿದ್ದಾರೆನ್ನಲಾಗಿದೆ.