ಬೆಂಗಳೂರು: ರಾಜ್ಯದ ಜನರು ಪೂರ್ಣ ಪ್ರಮಾಣದ ಸರ್ಕಾರ ನೋಡಲು ಇನ್ನೂ ಹೆಚ್ಚಿನ ದಿನ ಕಾಯಬೇಕಾಗಿದೆ. ಜೆಡಿಎಸ್ -ಕಾಂಗ್ರೆಸ್ ಮೈತ್ರಿಸರ್ಕಾರದ ಸಂಪುಟ ಕಸರತ್ತು ಪ್ರಯತ್ನ ನಿನ್ನೆ ವಿಫಲಗೊಂಡಿತ್ತು. ಈ ಮಧ್ಯೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅಮೆರಿಕಾ ಪ್ರವಾಸ ತೆರಳಿದ್ದು, ಮಾತುಕತೆಗೆ ಇನ್ನೂ ಹೆಚ್ಚಿನ ಕಾಲ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಕನಿಷ್ಠ ನಾಲ್ಕು ದಿನದ ಮಟ್ಟಿಗೆ ಎಲ್ಲಾ ಪ್ರಕ್ರಿಯೆಗಳು ಸ್ಥಗಿತಗೊಳಿಸಲಾಗಿದ್ದು, ರಾಹುಲ್ ಗಾಂಧಿ ಪ್ರವಾಸ ಮುಗಿಸಿ ಬಂದ ನಂತರ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಹುಲ್ ಗಾಂಧಿ ಭಾರತಕ್ಕೆ ವಾಪಾಸ್ಸಾದ ನಂತರ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಹಣಕಾಸು, ಲೋಕೋಪಯೋಗಿ, ಜಲ ಸಂಪನ್ಮೂಲ, ಕಂದಾಯ, ಇಂಧನ ಖಾತೆ ಬಗ್ಗೆಗಿನ ಪೈಪೋಟಿಯಿಂದಾಗಿ ಸಂಪುಟ ರಚನೆ ಬಿಕ್ಕಟ್ಟು ಉಂಟಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಹಣಕಾಸು, ಲೋಕೋಪಯೋಗಿ, ಜಲಸಂಪನ್ಮೂಲ ಖಾತೆಗೆ ಜೆಡಿಎಸ್ ಬಿಗಿ ಪಟ್ಟು ಹಿಡಿದಿದ್ದು, ಗೃಹ, ಕಂದಾಯ, ಇಂಧನ, ಬೆಂಗಳೂರು ನಗರಾಭಿವೃದ್ದಿ ಖಾತೆಯನ್ನು ಬಿಟ್ಟುಕೊಡಲು ಸಿದ್ಧವಿದೆ. ಆದರೆ ಹಣಕಾಸು, ಲೋಕೋಪಯೋಗಿ ಎರಡು ಇಲಾಖೆಯನ್ನು ತಮ್ಮಗೆ ನೀಡಬೇಕೆಂದು ಕಾಂಗ್ರೆಸ್ ಪಟ್ಟು ಹಿಡಿದಿದೆ.
ಹಣಕಾಸು ಖಾತೆ ಇಲ್ಲದೆ ಸಿಎಂ ಆದ್ದರೂ ಏನು ಪ್ರಯೋಜನವಿಲ್ಲ , ಜನತೆಗೆ ನೀಡಿರುವ ಭರವಸೆ ಈಡೇರಿಸುವ ಸಲುವಾಗಿ ಹಣಕಾಸು ಖಾತೆ ಬೇಕೆ ಬೇಕೂ ಎಂದು ಕುಮಾರಸ್ವಾಮಿ ಈಗಾಗಲೇ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಧರ್ಮಸಿಂಗ್ ಅವರ ನೇತೃತ್ವದ ಸರ್ಕಾರದ ಅವಧಿಯಲ್ಲಿ ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದರೂ ಜೆಡಿಎಸ್ ಪಕ್ಷದಲ್ಲಿದ್ದ ಸಿದ್ದರಾಮಯ್ಯ ಹಣಕಾಸು ಖಾತೆ ನಿರ್ವಹಿಸಿದ್ದರು. ಬಿಜೆಪಿ -ಜೆಡಿಎಸ್ ಸರ್ಕಾರದ ಅವಧಿಯಲ್ಲೂ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದು,ಯಡಿಯೂರಪ್ಪ ಹಣಕಾಸು ನಿರ್ವಹಿಸಿದ್ದರು. ಈ ಬಾರಿಯೂ ಅದೇ ಸಿದ್ದಾಂತವನ್ನು ಅಳವಡಿಸಬೇಕೆಂದು ತಮ್ಮ ಒತ್ತಾಯವಾಗಿದೆ ಎಂದು ಕಾಂಗ್ರೆಸ್ಸಿನ ಹಿರಿಯ ನಾಯಕರು ಹೇಳಿದ್ದಾರೆ.