ಸಿದ್ದು ನ್ಯಾಮಗೌಡರಿಗೆ ಅಂತಿಮ ನಮನ ಸಲ್ಲಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಪರಮೇಶ್ವರ್
ಬಾಗಲಕೋಟೆ: ರಸ್ತೆ ಅಪಘಾತದಲ್ಲಿ ಸೋಮವಾರ ನಸುಕಿನಲ್ಲಿ ಅಸುನೀಗಿದ್ದ ಶಾಸಕ ಸಿದ್ದು ನ್ಯಾಮಗೌಡ ಅವರ ಅಂತ್ಯಕ್ರಿಯೆ ಜಮಖಂಡಿ ತಾಲ್ಲೂಕಿನ ನಾಗನೂರಿನ ‘ಜಮಖಂಡಿ ಶುಗರ್ಸ್’ ಕಾರ್ಖಾನೆ ಆವರಣದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಜಮಖಂಡಿಯಿಂದ ನಾಗನೂರಿಗೆ ಅಂತಿಮ ಮೆರವಣಿಗೆ ನಡೆಯಿತಿ, ಈ ವೇಳೆ ರಾಷ್ಟ್ರಧ್ವಜ ಹೊದಿಸಿ ಗೌರವ ಸಲ್ಲಿಸಲಾಯಿತು. ಲಿಂಗಾಯತ- ವೀರಶೈವ ವಿಧಿ ವಿಧಾನದಂತೆ ಅಂತ್ಯ ಸಂಸ್ಕಾರ ನಡೆಸಲಾಯಿತು.
ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಾಪುರ ಜಿಲ್ಲೆಗಳಲ್ಲಿ ಅಂತ್ಯಕ್ರಿಯೆ ಮೆರವಣಿಗೆ ನಡೆಯಿತು. ಈ ವೇಳೆ ಅವರ ಅಪಾರ ಅಭಿಮಾನಿಗಳು ಸಿದ್ದು ನ್ಯಾಮಗೌಡ ಮತ್ತೆ ಹುಟ್ಟಿ ಬಾ ಎಂದು ಘೋಷಣೆ ಕೂಗಲಾಯಿತು. ಜಮಖಂಡಿಯ ಎಲ್ಲಾ ಅಂಗಡಿ ಮಾಲೀಕರು ತಮ್ಮ ಅಂಗಡಿಗಳನ್ನು ಸ್ವಇಚ್ಚೆಯಿಂದ ಮುಚ್ಚಿದ್ದರು.
ಕುಶಾಲ ತೋಪು ಸಿಡಿಸಿ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್ ಸರ್ಕಾರದ ಪರವಾಗಿ ಗೌರವ ಸಲ್ಲಿಸಿದರು.
ಅಂತಿಮ ದರ್ಶನ: ಇದಕ್ಕೂ ಮುನ್ನ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಮಖಂಡಿಯ ಪೊಲೊ ಮೈದಾನದಲ್ಲಿ ಇಡಲಾಗಿದ್ದ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
ಈ ವೇಳೆ ಮಾತನಾಡಿದ ಡಿಸಿಎಂ ಪರಮೇಶ್ವರ್ ಹಿರಿಯ ನಾಯಕ ಸಿದ್ದು ನ್ಯಾಮಗೌಡ ಅವರ ಸಾವು ತುಂಬಲಾರದ ನಷ್ಟ, ರೈತರಿಗೆ ನ್ಯಾಯ ಒದಗಿಸಲು ನಡೆಸಿದ ಹೋರಾಟ ಎಂದಿಗೂ ಮರೆಯಲಾಗದು, ಕಾಂಗ್ರೆಸ್ ಗೆ ಅವರ ಸಾವಿನಿಂದ ಅಪಾರ ನಷ್ಟವಾಗಿದೆ. ಅವರ ಸಾವಿನ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಭಗವಂತ ನೀಡಲಿ ಎಂದು ಪ್ರಾರ್ಥಿಸಿದರು.