ಮಂಗಳೂರು: ಮೆಕನು ಚೆಂಡಮಾರುತ ಪರಿಣಾಮ ಕರವಾಳಿ ಕರ್ನಾಟಕದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಈವರೆಗೂ ರಾಜ್ಯದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಮೆಕುನು ಚಂಡಮಾರುತ ಕಾರವಳಿಯಲ್ಲೂ ಸಾಕಷ್ಟು ಅವಾಂತರಗಳಿಗೆ ಕಾರಣವಾಗಿದ್ದು, ಮಂಗಳೂರು, ಉಡುಪಿ, ಕಾರವಾರದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಇನ್ನು ಮಹಾ ಮಳೆಗೆ ಈ ವರೆಗೂ ಇಬ್ಬರ ಬಲಿಯಾಗಿದ್ದು, ಪಡುಬಿದ್ರಿಯಲ್ಲಿ ಓರ್ವ ಬಾಲಕಿ ಮತ್ತು ಕರಾವಳಿಯಲ್ಲಿ ಗುಡ್ಡ ಕುಸಿದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ.
ಕಾಪು ತಾಲೂಕಿನ ಪಡುಬಿದ್ರಿಯ ಪಾದೆಬೆಟ್ಟು ಎಂಬಲ್ಲಿ ಶಾಲೆಯಿಂದ ಹಿಂದಿರುಗುತ್ತಿದ್ದ ವಿದ್ಯಾರ್ಥಿನಿ ನೆರೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾಳೆ. ಇಲ್ಲಿನ ನಿಧಿ ಆಚಾರ್ಯ ಎಂಬ 9 ವರ್ಷದ ಬಾಲಕಿ ಕಣ್ಮರೆಯಾಗಿದ್ದು, ನಿಧಿ ಆಚಾರ್ಯ ತನ್ನ ಅಕ್ಕ ನಿಶಾ ಆಚಾರ್ಯ ಜೊತೆ ಸೈಕಲ್ ನಲ್ಲಿ ಮನೆಗೆ ತೆರಳುತ್ತಿದ್ದಳು. ಪಟ್ಲ ಎಂಬಲ್ಲಿ ಕಿರು ಸೇತುವೆ ದಾಟುವಾಗ ಅವಘಡವಾಗಿದೆ. ರಭಸವಾಗಿ ಹರಿಯುತ್ತಿದ್ದ ನೀರು ಸೇತುವೆ ಮೇಲೆ ಬಂದಿತ್ತು. ಆ ರಭಸಕ್ಕೆ ಇಬ್ಬರು ಮಕ್ಕಳು ನೀರುಪಾಲಾಗಿದ್ದಾರೆ. ನಿಶಾ ಆಚಾರ್ಯಳನ್ನು ಸ್ಥಳೀಯರು ರಕ್ಷಿಸಿದ್ದಾರೆ. ಕಣ್ಮರೆಯಾದ ನಿಧಿ ಆಚಾರ್ಯಳಿಗೆ ಶೋಧಕಾರ್ಯ ಮುಂದುವರಿದಿದೆ. ಪಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅಗ್ನಿಶಾಮಕ ಸಿಬ್ಬಂದಿ ಪೊಲೀಸರು ಹುಡುಕಾಟ ಮಾಡುತ್ತಿದ್ದಾರೆ. ವಿಪರೀತ ಮಳೆಯಿಂದಾಗಿ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ.
ಅಂತೆಯೇ ಕರಾವಳಿಯಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಮಂಗಳೂರಿನ ಕೆಪಿಟಿ ಬಳಿ ಮನೆಗೆ ಗುಡ್ದ ಕುಸಿದ ಪರಿಣಾಮ ಮಹಿಳೆಯೊಬ್ಬರು ಮೃತ ಪಟ್ಟಿದ್ದಾರೆ. ಮೋಹಿನಿ (55) ಮಣ್ಣಿನ ಅಡಿ ಸಿಲುಕಿ ಮೃತಪಟ್ಟಿದ್ದಾರೆ. ಬೆಳಗ್ಗೆ 10 ಗಂಟೆಯ ವೇಳೆಗೆ ಈ ಘಟನೆ ನಡೆದಿದ್ದು, ಸತತ 9 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮಹಿಳೆಯ ದೇಹವನ್ನು ಹೊರತೆಗೆಯಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos