ಮಂಗಳೂರು: ಉಡುಪಿ, ದಕ್ಷಿಣ ಕನ್ನಡದಲ್ಲಿ ಭೀಕರ ಮಳೆ ಹಿನ್ನಲೆಯಲ್ಲಿ ತುರ್ತು ರಕ್ಷಣಾ ಕಾರ್ಯಾಚರಣೆ ಕೈಗೊಳ್ಳುವಂತೆ ಸಿಎಂ ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಕರಾವಳಿ ಕರ್ನಾಟಕದಲ್ಲಿ ಭಾರಿ ಮಳೆ ಹಿನ್ನಲೆಯಲ್ಲಿ ಇಂದು ಸಿಎಂ ಕುಮಾರಸ್ವಾಮಿ ಅವರು ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದಿದ್ದು, ಪ್ರವಾಹದಿಂದ ಸಾರ್ವಜನಿಕರನ್ನು ರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಿಎಂ ಸೂಚನೆ ನೀಡಿದ್ದಾರೆ. ಅಲ್ಲದೇ ರಕ್ಷಣಾ ಕಾರ್ಯಾಚರಣೆಗೆ ಕೋಸ್ಟ್ ಗಾರ್ಡ್ ಪಡೆಯ ನೆರವು ಪಡೆದು ಹೆಚ್ಚಿನ ಅನಾಹುತಗಳಾಗದಂತೆ ಮುನ್ನೆಚ್ಚರಿಕೆ ವಹಿಸಲು ಆದೇಶ ನೀಡಿದ್ದಾರೆ.
ಇನ್ನು ಮೆಕುನು ಚಂಡಮಾರುತ ಹಿನ್ನೆಲೆಯಲ್ಲಿ ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡಿದೆ. ಸಮುದ್ರದ ನೀರು ಬಣ್ಣ ಬದಲಾಯಿಸಿದ್ದು ಸ್ಥಳೀಯರು ಆತಂಕಗೊಂಡಿದ್ದಾರೆ. ಅರ್ಧ ಕಿ.ಮೀ ದೂರದಿಂದಲೇ ಭಾರಿ ಎತ್ತರೆದ ಅಲೆಗಳು ಮೇಲೇರಿ ಬರುತ್ತಿದೆ. ಕಡಲಿನ ಅಬ್ಬರ ಕಂಡು ಕರಾವಳಿಗರಲ್ಲಿ ಆತಂಕ ಸೃಷ್ಟಿಯಾಗಿದ್ದು, ಕಾಪು, ಮಲ್ಪೆ, ಮರವಂತೆ, ಪಡುಬಿದ್ರೆ ಬೀಚ್ ಗಳಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ. ಇನ್ನು 24 ಗಂಟೆಗಳ ಕಾಲ ಭಾರೀ ಮಳೆ ಆಗುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕೇರಳ ಕರಾವಳಿ ಭಾಗದಲ್ಲಿ ವಾಯುಭಾರ ಕುಸಿತ ಹಿನ್ನಲೆಯಲ್ಲಿ ಮುಂಗಾರು ಮತ್ತಷ್ಟು ಚುರುಕುಗೊಂಡಿದ್ದು, ಮುಂದಿನ ಎರಡು ದಿನಗಳಲ್ಲಿ ರಾಜ್ಯದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಅಲ್ಲದೇ ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಭಾಗದಲ್ಲಿ ಭಾರೀ ಮಳೆಯಾಗುವ ಸಂಭವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
3 ದಿನ ಮುನ್ನವೇ ಮುಂಗಾರು ಆಗಮನ
ದೇಶಕ್ಕೆ ನೈರುತ್ಯ ಮುಂಗಾರು ಮಳೆ 3 ದಿನ ಮುನ್ನವೇ ಕೇರಳದ ಭಾಗಕ್ಕೆ ಆಗಮಿಸಿದ್ದು, ಇನ್ನೂ ಎರಡು ದಿನಗಳಲ್ಲಿ ರಾಜ್ಯಕ್ಕೆ ಮುಂಗಾರು ಅಗಮನ ಸಾಧ್ಯತೆ ಇರುವುದಾಗಿ ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ಮಾಹಿತಿ ನೀಡಿದೆ.