ಬೆಂಗಳೂರು: ಬಳ್ಳಾರಿ ಲೋಕಸಭೆ ಉಪಚುನಾವಣೆಗೆ ಇನ್ನೇನು ಒಂದೇ ದಿನವಿರುವಾಗ ಕಾಂಗ್ರೆಸ್ ಅಭ್ಯರ್ಥಿ ವಿ ಎಸ್ ಉಗ್ರಪ್ಪನವರಿಗೆ ನ್ಯಾಯಾಲಯ ಶಾಕ್ ನೀಡಿದೆ. ಅಪಘಾತ ಪ್ರಕರಣವೊಂದರಲ್ಲಿ ಗಾಯಾಳುಗಳಿಗೆ ಪರಿಘಾರ ಮೊತ್ತ ಪಾವತಿಸದಿರುವ ಉಗ್ರಪ್ಪನವರ ಮನೆಯಲ್ಲಿನ ಚರಾಸ್ತಿಗಳನ್ನು ಜಪ್ತಿ ಮಾಡುವಂತೆ ಕೋರ್ಟ್ ಆದೇಶಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ 4ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಉಗ್ರಪ್ಪನವರ ಮನೆಯಲ್ಲಿನ ಚರಾಸ್ಥಿಗಳನ್ನು ವಶಕ್ಕೆ ಪಡೆಯುವಂತೆ ಆದೇಶಿಸಿದ್ದು 2010ರಲ್ಲಿ ನಡೆದಿದ್ದ ಅಪಘಾತ ಪ್ರಕರಣ ಸಂಬಂಧ ಈ ತೀರ್ಪು ನೀಡಲಾಗಿದೆ.
2010ರಲ್ಲಿ ಉಗ್ರಪ್ಪ ಅವರ ಕ್ವಾಲಿಸ್ ಕಾರು ದೊಡ್ಡಬಳ್ಳಾಪುರದಲ್ಲಿ ದ್ವಿಚಕ್ರ ವಾಹನವೊಂದಕ್ಕೆ ಡಿಕ್ಕಿಯಾಗಿದ್ದು ವಾಹನ ಸವಾರ ಬಾಲಾಜಿ ಗಂಭೀರವಾಗಿ ಗಾಯಗೊಂಡಿದ್ದರು.ಆದರೆ ಕಾನೂನು ಪ್ರಕಾರ ಅಪಘಾತ ಪರಿಹಾರ ಮೊತ್ತವನ್ನು ನೀಡದೆ ನ್ಯಾಯಾಲಯದ ಆದೇಶವನ್ನು ಕಾಂಗ್ರೆಸ್ ಮುಖಂಡ ಉಲ್ಲಂಘಿಸಿದ್ದಾರೆ.
ಶುಕ್ರವಾರ ಈ ಪ್ರಕರಣ ಮರು ವಿಚಾರಣೆ ನಡೆದಿದ್ದು ಉಗ್ರಪ್ಪನವರ ಮನೆಯಲ್ಲಿನ ಚರಾಸ್ಥಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕೋರ್ಟ್ ಸೂಚಿಸಿದೆ.
ಈ ಹಿಂದೆ ನಡೆದ ವಿಚಾರಣೆ ವೇಳೆ ನ್ಯಾಯಾಲಯ ಉಗ್ರಪ್ಪನವರಿಗೆ ಅಪಘಾತ ಪರಿಹಾರ ಒತ್ತ ಪಾವತಿಸುವಂತೆ ಸೂಚಿಸಿತ್ತು. ಆದರೆ ಇದುವರೆಗೆ ಆ ಹಣವನ್ನು ಅವರು ಪಾವತಿಸಿರಲಿಲ್ಲ. ಅಲ್ಲದೆ ವಿಚಾರಣೆಗೆ ಸಹ ಹಾಜರಾಗಿರಲಿಲ್ಲ.
ಪರಿಷತ್ ಸದಸ್ಯ್ರಾಗಿರುವ ಉಗ್ರಪ್ಪ ಇದೀಗ ಬಳ್ಳಾರಿ ಕ್ಷೇತ್ರದ ಲೋಕಸಭೆ ಉಪ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.ಈ ಹಿನ್ನೆಲೆಯಲ್ಲಿ ಕೋರ್ಟ್ ಆದೇಶ ಚುನಾವಣೆ ಮೇಲೆ ಯಾವ ಪರಿಣಾಮ ಬೀರಲಿದೆ ಕಾದು ನೋಡಬೇಕಿದೆ.