ಕರ್ನಾಟಕದ ರೈತರ ಬಂಧನಕ್ಕೆ ಕೋಲ್ಕತ್ತಾ ಕೋರ್ಟ್ ವಾರೆಂಟ್: ಸಿಎಂ ಹೆಚ್ ಡಿ ಕೆ ಮಧ್ಯಪ್ರವೇಶ!
ಬೆಳಗಾವಿ: ಕರ್ನಾಟಕದ ಹಲವು ರೈತರ ಬಂಧನಕ್ಕೆ ಕೋಲ್ಕತ್ತಾ ಕೋರ್ಟ್ ವಾರೆಂಟ್ ಜಾರಿಗೊಳಿಸಿದ್ದು ಈಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿರುವ ರೈತರಿಗೆ ವಾರೆಂಟ್ ಬರಸಿಡಿಲಿನಂತೆ ಅಪ್ಪಳಿಸಿದೆ.
ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ನ ಅಡಿಯಲ್ಲಿ ಬೆಳಗಾವಿಯ ಸವದತ್ತಿ ರೈತರಿಗೆ ಕೋಲ್ಕತ್ತಾ ಕೋರ್ಟ್ ವಾರೆಂಟ್ ಜಾರಿಗೊಳಿಸಿದ್ದು, ಫೆ.18, 2019 ರ ವೇಳೆಗೆ ಕೋರ್ಟ್ ಎದುರು ಹಾಜರುಪಡಿಸುವಂತೆ ಸ್ಥಳೀಯ ಪೊಲೀಸರಿಗೆ ಸೂಚನೆ ನೀಡಿದೆ. ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಸಿಕ್ಕಿರುವ ಮಾಹಿತಿಯ ಪ್ರಕಾರ ಬೆಳಗಾವಿಯ ಹಲವು ರೈತರು ಆಕ್ಸಿಸ್ ಬ್ಯಾಂಕ್ ನಿಂದ ಸಾಲ ಪಡೆದಿದ್ದರು. ಈಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿರುವ ರೈತರಿಗೆ ಆಕ್ಸಿಸ್ ಬ್ಯಾಂಕ್ ನಿಂದ ಪಡೆದಿರುವ ಸಾಲದ ಪರಿಣಾಮ ವಾರೆಂಟ್ ಬಂದಿರುವುದು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.
ರಾಜ್ಯ ರೈತರ ಸಾಲ ಮನ್ನಾ ಮಾಡಿರುವ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಕೋಲ್ಕತ್ತಾ ಕೋರ್ಟ್ ಬೆಳಗಾವಿ ರೈತರ ಬಂಧನಕ್ಕೆ ವಾರೆಂಟ್ ಜಾರಿಗೊಳಿಸಿರುವುದರ ಮಾಹಿತಿ ಸಿಕ್ಕ ರೈತರನ್ನು ರಕ್ಷಿಸುವುದಕ್ಕೆ ಕೂಡಲೇ ಕ್ರಮ ಕೈಗೊಳ್ಳಲು ಬೆಳಗಾವಿ ಉಪ ಆಯುಕ್ತರಿಗೆ ಮಾಹಿತಿ ನೀಡಿದ್ದು, ಸಾಲ ಮನ್ನ ಮಾಡುವ ಆದೇಶದ ನಂತರವೂ ಏಕೆ ಬಂಧನ ವಾರೆಂಟ್ ಜಾರಿಗೊಳಿಸಲಾಗಿದೆ ಎಂಬುದನ್ನು ಪ್ರಶ್ನಿಸಲು ಸಿಎಂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸಿಎಂ ಆದೇಶದಂತೆ ಜಿಲ್ಲಾಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದು, ರೈತರ ಹಿತಾಸಕ್ತಿಗೆ ಧಕ್ಕೆ ಬಾರದಂತೆ ಕ್ರಮ ಕೈಗೊಳ್ಳುವುದಾಗಿ ಧೈರ್ಯ ತುಂಬಿದ್ದಾರೆ. ಇದೇ ವೇಳೆ ಆಕ್ಸಿಸ್ ಬ್ಯಾಂಕ್ ಅಧಿಕಾರಿಗಳೊಂದಿಗೂ ಮಾತನಾಡಿರುವ ಅವರು ಸಾಲ ಪಡೆದಿರುವ ರೈತರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಮನವಿ ಮಾಡಿದ್ದಾರೆ. ಕನಿಷ್ಟ 100 ರೈತರಿಗೆ ಬಂಧನ ವಾರೆಂಟ್ ಜಾರಿಯಾಗಿದೆ.