ಬೆಂಗಳೂರು: ನಕಲಿ ಟಿಕೆಟ್ ಎಂದು ಹಿರಿಯ ನಾಗರೀಕರಿಗೆ ಇರಿಸು ಮುರಿಸು ಉಂಟು ಮಾಡಿದ್ದಕ್ಕಾಗಿ ಆನ್ ಲೈನ್ ಟ್ರಾವೆಲ್ ಕಂಪನಿ ಮೇಕ್ ಮೈ ಟ್ರಿಪ್ ಇದೀಗ ರೂ.4.70 ಲಕ್ಷ ಪರಿಹಾರ ನೀಡಬೇಕಾಗಿ ಬಂದಿದೆ.
ನಗರದ ಗ್ರಾಮೀಣ ಮತ್ತು ನಗರ ಹೆಚ್ಚುವರಿ ಜಿಲ್ಲಾ ಗ್ರಾಹಕ ಪರಿಹಾರ ವೇದಿಕೆ ಮೇಕ್ ಮೈ ಟ್ರಿಪ್ ಇಂಡಿಯಾ ಲಿಮಿಟೆಡ್'ಗೆ ದಂಡವನ್ನು ವಿಧಿಸಿದ್ದು, ಹಿರಿಯ ನಾಗರೀಕರಿಗೆ ಪರಿಹಾರವಾಗಿ ರೂ.4.70 ಲಕ್ಷ ನೀಡುವಂತೆ ಸೂಚಿಸಿದೆ.
ಹೆಚ್ಆರ್'ಬಿಆರ್ ಲೇಔಟ್ ನಿವಾಸಿಗಳಾಗಿರುವ ರಾಮಚಂದ್ರ ಕೆಂಪಯ್ಯ (63) ಹಾಗೂ ಅವರ ಪತ್ನಿ ನಾಗರತ್ನ ಕೆಂಪಯ್ಯ (61) ಪ್ಯಾಕೇಜ್ ಪ್ರವಾಸಕ್ಕಾಗಿ ರೂ.1.44 ಲಕ್ಷ ವ್ಯಯಿಸಿದ್ದರು. ರೂ.1.44 ಲಕ್ಷ ಖರ್ಚು ಮಾಡಿದ್ದರು. ಎಂಎಂಟಿಐಎಲ್ ಫ್ರಾಂಚೈಸಿಗಳು ನಕಲಿ ವಿಮಾನಯಾನ ಟಿಕೆಟ್ ಗಳನ್ನು ನೀಡಿದ್ದಾರೆ.
ಮಲೇಷಿಯಾ ಪ್ರವಾಸಕ್ಕಾಗಿ ದಂಪತಿಗಳು ರೂ.1.44 ಖರ್ಚು ಮಾಡಿದ್ದರು. 2015ರ ಡಿಸೆಂಬರ್ 13 ರಂದು ನಗರದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿದ್ದಾರೆ. ಇದರಂತೆ ಡಿ.14ರಂದು ಎಂಎಂಟಿಐಎಲ್ ಎರಡು ವಿಮಾನಯಾನ ಟಿಕೆಟ್ ಗಳನ್ನು ನೀಡಿ ಮಲೇಷಿಯಾದ ಕೌಲಾಲಂಪುರ್'ಗೆ ಬಂದಾಗ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿರುತ್ತದೆ ಎಂದು ತಿಳಿಸಿದ್ದಾರೆ.
ಆದರೆ, ಮಲೇಷಿಯಾಗೆ ತೆರಳಿದಾಗ ಅಲ್ಲಿ ಯಾವುದೇ ರೀತಿಯ ವ್ಯವಸ್ಥೆಗಳನ್ನು ಮಾಡದೇ ಇರುವುದು ಕಂಡು ಬಂದಿತ್ತು. ಅಲ್ಲದೆ, ಇದೇ ವೇಳೆ ದಂಪತಿಗಳಿಗೆ ನೀಡಲಾಗಿರುವ ವೀಸಾಗಳೂ ನಕಲಿ ಎಂಬುದು ತಿಳಿದಿದೆ. ಕೂಡಲೇ ದಂಪತಿಗಳು ಗ್ರಾಹಕರ ವೇದಿಕೆಗೆ ತೆರಳಿ ಮೇಕ್ ಮೈ ಟ್ರಿಪ್ ವಿರುದ್ಧ ದೂರು ದಾಖಲಿಸಿದ್ದಾರೆ.
ಇದರಂತೆ ಸುದೀರ್ಘ ವಿಚಾರಣೆ ನಡೆಸಿರುವ ವೇದಿಕೆಯು ಎಂಎಂಟಿಐಎಲ್'ಗೆ ರೂ.4.70 ಲಕ್ಷ ಪರಿಹಾರ ಹಣವನ್ನು ಹಿರಿಯ ನಾಗರೀಕರಿಗೆ ನೀಡುವಂತೆ ಸೂಚಿಸಿದೆ. ಮಾನನಷ್ಟಕ್ಕಾಗಿ ರೂ.2 ಲಕ್ಷ, ಹಿರಿಯ ನಾಗರೀಕರಿಬ್ಬರು ಅನುಭವಿಸಿದ ಮಾನಸಿಕ ಸಂಕಷ್ಟಕ್ಕೆ ರೂ.30 ಸಾವಿರ ಹಾಗೂ ಮೊಕದ್ದಮೆಗೆ ರೂ.10 ಸಾವಿರ ನೀಡುವಂತೆ ಸೂಚಿಸಿದೆ.
ದಂಪತಿಗಳನ್ನು ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದರು. ಸುದೀರ್ಘಾವಧಿ ಹಿರಿಯ ನಾಗರೀಕರು ಕಾಯುವಂತಾಗಿತ್ತು. ಅಲ್ಲದೆ, ಸಿಂಗಾಪುರದಲ್ಲಿ ವಲಸೆ ಅಧಿಕಾರಿಗಳಿಂದ ವಿಚಾರಣೆಯನ್ನೂ ಎದುರಿಸಬೇಕಾಗಿತ್ತು. ಇವೆಲ್ಲವೂ ಎಂಎಂಟಿಐಎಲ್ ನೀಡಿದ್ದ ನಕಲಿ ವೀಸಾಗಳಿಂದ ನಡೆದಿದೆ. ಇದರ ಪರಿಣಾಮ ದಂಪತಿಗಳ ಗೌರವಕ್ಕೂ ಧಕ್ಕೆಯುಂಟಾಗಿದೆ.
ಕೆಂಪಯ್ಯ ಅವರ ಪುತ್ರ ಆರ್.ಮೋಹನ್ ಕುಮಾರ್ ಅವರು ಸಿಂಗಾಪುರ ಹಾಗೂ ಮಲೇಷಿಯಾ ಪ್ರವಾಸಕ್ಕೆ ಟಿಕೆಟ್ ಗಳನ್ನು ಬುಕ್ ಮಾಡಿದ್ದಾರೆ. ರೂ.1.44 ಲಕ್ಷ ವ್ಯಯಿಸಿದ್ದರೂ ನ್ನ ಪೋಷಕರು ಮಲೇಷಿಯಾ ಹಾಗೂ ಸಿಂಗಾಪುರ ಪ್ರವಾಸಕ್ಕೆ ತೆರಳಲು ವಲಸೆ ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿರಲಿಲ್ಲ. ಪೋಷಕರಿಗೆ ನೀಡಲಾಗಿದ್ದ ವೀಸಾಗಳು ನಕಲಿಯಾಗಿದ್ದವು. ಸುಮಾರು 6 ಗಂಟೆಗಳ ಕಾಲ ವಲಸೆ ಅಧಿಕಾರಿಗಳ ವಶದಲ್ಲಿದ್ದರು. ನನ್ನ ಪೋಷಕರು ಕ್ರಿಮಿನಲ್ ಗಳಾಗಿದ್ದರೆ ಎಂದು ಅನುಮಾನಿಸಿದ್ದ ಅಧಿಕಾರಿಗಳು ಫೋಟೋ ಹಾಗೂ ಅವರ ಬೆರಳಚ್ಚುಗಳನ್ನೂ ಪಡೆದುಕೊಂಡಿದ್ದಾರೆಂದು ಮೋಹನ್ ಅವರು ಹೇಳಿದ್ದಾರೆ.