ಚಿಕ್ಕಮಗಳೂರು: ಬಸ್ ಪಲ್ಟಿ, ಶಾಲಾ ಪ್ರವಾಸಕ್ಕೆ ತೆರಳಿದ್ದ ವಿದ್ಯಾರ್ಥಿನಿ ಸಾವು
ಚಿಕ್ಕಮಗಳೂರು: ಶಾಲಾ ಪ್ರವಾಸಕ್ಕಾಗಿ ತೆರಳಿದ್ದಾಗ ಚಾಲಕನ ನಿಯಂತ್ರಣ ತಪ್ಪಿದ ಕಾರಣ ಬಸ್ ಪಲ್ಟಿಯಾಗಿ ಹತ್ತನೇ ತರಗತಿ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರಿನ ಎನ್.ಆರ್.ಪುರ ತಾಲೂಕಿನ ಸೌತಿಕೆರೆ ಸಮೀಪ ನಡೆದ ಅವಘಡದಲ್ಲಿ ದಿಯಾ ಎಂಬ ವಿದ್ಯಾರ್ಥಿನಿ ಸಾವಿಗೀಡಾಗಿದ್ದಾಳೆ. ಅಪಘಾತಕ್ಕೀಡಾದ ಬಸ್ ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಪೂರ್ಣಪ್ರಜ್ಞಾ ಶಾಲೆಗೆ ಸೇರಿದ್ದಾಗಿ ಹೇಳಲಾಗಿದೆ.
ಭದ್ರಾವತಿಯ ಪೂರ್ಣಪ್ರಜ್ಞಾ ವಿದ್ಯಾರ್ಥಿಗಳು ಉಡುಪಿಗೆ ಪ್ರವಾಸಕ್ಕೆ ತೆರಳುತ್ತಿದ್ದ ವೇಳೆ ಎನ್.ಆರ್.ಪುರ ತಾಲೂಕಿನ ಸೌತಿಕೆರೆ ಸಮೀಪ ಬಸ್ ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದೆ,.ಅಪಘಾತದಲ್ಲಿ ದಿಯಾ ಸಾವನ್ನಪ್ಪಿದ್ದರೆ ಇನ್ನೂ ಐವರು ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಳಿದ 39 ವಿದ್ಯಾರ್ಥಿಗಳಿಗೆ ಸಹ ಸಣ್ಣ ಪುಟ್ಟ ಗಾಯಗಳಾಗಿದ್ದು ಅವರನ್ನು ನ್‍ಆರ್ ಪುರ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಒದಗಿಸಲಾಗಿದೆ.
ಸ್ಥಳೀಯರ ನೆರವಿನಿಂದ ವಿದ್ಯಾರ್ಥಿಗಳನ್ನು ಬಸ್ ನಿಂದ ಹೊರತೆಗೆಯಲಾಗಿದೆ.ಘಟನೆ ಕುರಿತು ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೇತ್ರದಾನ
ದಿಯಾ ಸಾವು ತಂದ ನೋವಿನ ಹೊರತಾಗಿಯೂ ಆಕೆ ಪೋಷಕರ್ತು ಅವಳ ನೇತ್ರದಾನ ಮಾಡಿ ಸಾರ್ಥಕ ಕೆಲಸ ನಿರ್ವಹಿಸಿದ್ದಾರೆ.
ದಿಯಾ ಸಾವಿನ ಸುದ್ದಿ ಕೇಳಿದ ಆಕೆಯ ತಂದೆ ನಿವೃತ್ತ ಕರ್ನಲ್ ರಾಜೇಂದ್ರ ಸಿಂಗ್ ಶೇರಾವತ್ ಆಸ್ಪತ್ರೆಗೆ ಧಾವಿಸಿ ದಿಯಾಳ ಕಣ್ಣುಗಳನ್ನು ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆಗೆ ದಾನ ಮಾಡಿದ್ದಾರೆ.
ನೋವಿನ ನಡುವೆಯೂ ಮಾನವೀಯತೆಯ ಪ್ರದರ್ಶನ ಮಾಡಿದ ದಿಯಾ ಪಾಲಕರ ಕೆಲಸಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.