ರಾಜ್ಯ

ರಸ್ತೆ ಬದಿ ವ್ಯಾಪಾರಿಗಳಿಗೆ, ಸಣ್ಣ ಉದ್ದಿಮೆದಾರರಿಗೆ 'ಬಡವರ ಬಂಧು' ಜಾರಿ

Sumana Upadhyaya

ಬೆಂಗಳೂರು: ರಸ್ತೆ ಬದಿ ವ್ಯಾಪಾರಿಗಳು ಮತ್ತು ಸಣ್ಣ ಉದ್ಯಮಿಗಳಿಗೆ ಬಡ್ಡಿರಹಿತ ಸಾಲ ನೀಡಲು ಮೊಬೈಲ್ ಬ್ಯಾಂಕುಗಳನ್ನು ಇದೇ 22ರಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ.

ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ್ ಈ ವಿಷಯವನ್ನು ತಿಳಿಸಿದ್ದು, ಬಡವರ್ಗದ ಸಣ್ಣ ವ್ಯಾಪಾರಿಗಳಿಗೆ ಬಡ್ಡಿರಹಿತ ಸಾಲ ನೀಡುವ ಮೂಲಕ ಅವರಿಗೆ ಆರ್ಥಿಕವಾಗಿ ನೆರವು ನೀಡುವುದು ಉದ್ದೇಶವಾಗಿದೆ ಎಂದರು.

ಬಡವರ ಬಂಧು ಎಂಬ ಯೋಜನೆಯಡಿ ಸಣ್ಣ ವ್ಯಾಪಾರಿಗಳಿಗೆ ಮತ್ತು ರಸ್ತೆ ಬದಿ ವ್ಯಾಪಾರಿಗಳಿಗೆ ಬಡ್ಡಿರಹಿತ 10 ಸಾವಿರದವರೆಗೆ ಸಾಲ ನೀಡಲಾಗುತ್ತದೆ. ಸಾಲ ಪಡೆದ ನಂತರ ವ್ಯಾಪಾರಿಗಳು ಪ್ರತಿನಿತ್ಯ 100 ರೂಪಾಯಿಯಂತೆ ಅಥವಾ 100 ದಿನಗಳೊಳಗೆ ಒಂದೇ ಸಲಕ್ಕೆ ಸಾಲವನ್ನು ಹಿಂತಿರುಗಿಸುವ ಸೌಲಭ್ಯ ಕೂಡ ಇದೆ. ಪ್ರಭಾವಿ ಹಣ ಸಾಲ ನೀಡುವವರಿಂದ ಅಧಿಕ ಬಡ್ಡಿಮೊತ್ತಕ್ಕೆ ಸಾಲ ಪಡೆದುಕೊಂಡು ಹಿಂತಿರುಗಿಸಲಾಗದೆ ಕಿರುಕುಳ ಅನುಭವಿಸುವುದರಿಂದ ತಪ್ಪಿಸಲು ಸರ್ಕಾರ ಬಡ ವ್ಯಾಪಾರಿಗಳಿಗೆ ನೆರವಾಗಲು ಈ ಯೋಜನೆಯನ್ನು ಜಾರಿಗೆ ತಂದಿದೆ.

ನಾಡಿದ್ದು ಉದ್ಘಾಟನೆ ದಿನ ಮೊಬೈಲ್ ಬ್ಯಾಂಕುಗಳನ್ನು ಪ್ರತಿ ಜಿಲ್ಲೆಯಲ್ಲಿ ಉದ್ಘಾಟಿಸಲಾಗುತ್ತಿದ್ದು, ಬೆಂಗಳೂರಿನಲ್ಲಿ ಮೂರು ಮೊಬೈಲ್ ಬ್ಯಾಂಕುಗಳು ಆರಂಭಗೊಳ್ಳಲಿವೆ. ಮೊದಲ ಹಂತದಲ್ಲಿ 53 ಸಾವಿರ ಫಲಾನುಭವಿಗಳು ಇದರಲ್ಲಿ ಒಳಗೊಳ್ಳಲಿದ್ದು, ಅವುಗಳಲ್ಲಿ 5 ಸಾವಿರ ಬೆಂಗಳೂರಿನವರಾಗಿದ್ದಾರೆ.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕಾಯಕ ಯೋಜನೆಯನ್ನು ಉದ್ಘಾಟಿಸಲಿದ್ದಾರೆ. ಅದರಲ್ಲಿ ಸಣ್ಣ ಉದ್ಯಮಗಳನ್ನು ಆರಂಭಿಸಲು ಸ್ವಸಹಾಯ ಗುಂಪುಗಳಿಗೆ 10 ಲಕ್ಷದವರೆಗೆ ಸಾಲ ನೀಡಲಾಗುತ್ತದೆ. ಅದರಲ್ಲಿ 5 ಲಕ್ಷದವರೆಗೆ ಸಾಲಕ್ಕೆ ಬಡ್ಡಿರಹಿತವಾಗಿದ್ದು ಉಳಿದ 5 ಲಕ್ಷಕ್ಕೆ ಶೇಕಡಾ 4ರ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತದೆ.

SCROLL FOR NEXT