ಬೆಂಗಳೂರು: ಮನೆಗೆ ಬೆಂಕಿ ಬಿದ್ದ ಪರಿಣಾಮ ದಟ್ಟ ಹೊಗೆಯಿಂದ ಉಸಿರಾಡಲು ಸಾಧ್ಯವಾಗದೆ ಉಸಿರುಗಟ್ಟಿ ಮಕ್ಕಳಿಬ್ಬರು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.
ತಂದೆ-ತಾಯಿ ತಮ್ಮ ಮಕ್ಕಳಿಬ್ಬರನ್ನು ಮನೆಯೊಳಗೆ ಬಿಟ್ಟು ಬಾಗಿಲಿಗೆ ಬೀಗ ಹಾಕಿಕೊಂಡು ಕೆಲಸಕ್ಕೆ ಹೋಗಿದ್ದ ವೇಳೆ, ಮನೆಗೆ ಬೆಂಕಿ ಬಿದ್ದ ಪರಿಣಾಮ ಹೊಗೆಯಿಂದಾಗಿ ಮಕ್ಕಳಿಬ್ಬರು ಉಸಿರುಗಟ್ಟಿ ಸಾವನ್ನಪ್ಪಿದ್ದರು. ಸಾಜನ್ ಮತ್ತು ಲಕ್ಷ್ಮೀ ಎಂಬ ಮಕ್ಕಳಿಬ್ಬರು ಮೃತಪಟ್ಟಿದ್ದರು.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಸ್ಥಳದಲ್ಲಿ ಬಿದ್ದಿದ್ದ ಬಟ್ಟೆಯನ್ನು ವಶಕ್ಕೆ ಪಡೆದಿದ್ದಾರೆ. ಬೆಡ್ ಮೇಲೆ ಅಂಟಿಕೊಂಡಿದ್ದ ಆ ಬಟ್ಟೆ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಬೆಡ್ ಕೂಡ ಅರ್ಧದಷ್ಟು ಸುಟ್ಟುಹೋಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಮಕ್ಕಳ ಶ್ವಾಸಕೋಶದ ತುಂಬಾ ಹೊಗೆ ತುಂಬಿರುವುದಾಗಿ ವೈದ್ಯರು ಹೇಳಿದ್ದರು ಎಂದು ಹಿರಿಯ ಆಧಿಕಾರಿ ಹೇಳಿದ್ದಾರೆ.
ಮನೆ ಮಾಲೀಕ ಅನಿಲ್ ಕುಮಾರ್ ಆರ್. ಮಾತನಾಡಿ, ಮಕ್ಕಳು ಬಹಳ ಚುರುಕಾಗಿದ್ದರು. ಮಕ್ಕಳ ಪೋಷಕರು ನೇಪಾಳ ಮೂಲದವಾಗಿದ್ದು, ಪ್ರತೀನಿತ್ಯ ಮಕ್ಕಳನ್ನು ಮನೆಯೊಳಗೆ ಬಿಟ್ಟು ಬೀಗ ಹಾಕಿಕೊಂಡೇ ಕೆಲಸಕ್ಕೆ ತೆರಳುತ್ತಿದ್ದರು. ದುರಂತದಲ್ಲಿ ಮಕ್ಕಳು ಅಂತ್ಯಗೊಂಡಿರುವುದು ನಿಜಕ್ಕೂ ದುರಾದೃಷ್ಟಕರ. ಕಾಂಪೌಂಡ್ ನಲ್ಲಿ ಮಕ್ಕಳು ಆಟವಾಡುತ್ತಿರುವುದು ಈಗಲೂ ಕಣ್ಣಿಗೆ ಕಟ್ಟಿದಂತಿದೆ ಎಂದು ಹೇಳಿದ್ದಾರೆ.