ಬೆಂಗಳೂರು: ಸುಮಾರು 6 ಸಾವಿರಕ್ಕೂ ಅಧಿಕ ಮಂದಿಯನ್ನು ವಂಚಿಸಿ 500 ಕೋಟಿ ರೂಪಾಯಿಗೂ ಅಧಿಕ ಹಣ ಎಗರಿಸಿದ ಆರೋಪದ ಮೇಲೆ ಬೆಳ್ಳಂದೂರು ಪೊಲೀಸರು ತಂದೆ-ಮಗ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು ಶಣ್ಮುಗಮ್, ಆತನ ಪುತ್ರ ದಿಲೀಪ್ ಮತ್ತು ಕ್ಯಾಶಿಯರ್ ನಾಗರಾಜ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಕೋಲಾರ ಜಿಲ್ಲೆಯ ಬಂಗಾರಪೇಟೆ ನಿವಾಸಿಗಳು.
ಬಂಗಾರಪೇಟೆಯಲ್ಲಿ ಅಕ್ಕಿ ಗಿರಣಿ ಹೊಂದಿರುವ ಶಣ್ಮುಗಮ್ ಶಣ್ಮುಗಮ್ ಫೈನಾನ್ಸ್ ಮತ್ತು ಆರ್ ಕೆ ಎನ್ ಚಿಟ್ ಫಂಡ್ ಹೂಡಿಕೆ ಸಂಸ್ಥೆ ಆರಂಭಿಸಿ ಜನರಿಂದ ಹಣ ಪಡೆಯುತ್ತಿದ್ದರು.
ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿ ಒಂದು ತುಂಡು ಜಮೀನು ಪಡೆಯಲು ಶಣ್ಮುಗಮ್ ಗೆ 6 ಕೋಟಿ ರೂಪಾಯಿ ನೀಡಿದ್ದಾಗಿ ಬಸವನಗುಡಿಯ ನಿವಾಸಿ ಪಿ ಆರ್ ಸತ್ಯನಾರಾಯಣ ಕೇಸು ದಾಖಲಿಸಿದ್ದರು. ಆದರೆ ಸತ್ಯನಾರಾಯಣ ಹೆಸರಿಗೆ ಜಮೀನು ದಾಖಲು ಮಾಡಲಿಲ್ಲ, ಹಣವನ್ನು ಕೂಡ ಹಿಂತಿರುಗಿಸಲಿಲ್ಲ ಎಂದು ದೂರು ನೀಡಿದ್ದರು.
ಇದರ ಆಧಾರದ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿ ಬಂಗಾರಪೇಟೆಯಲ್ಲಿ ಮೂವರನ್ನೂ ಕಳೆದ 9ರಂದು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಮೂವರನ್ನೂ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.
ಒಂದು ವಾರದೊಳಗೆ ಹಣ ಹಿಂತಿರುಗಿಸುವುದಾಗಿ ಶಣ್ಮುಗಪ್ಪ ಮಾತು ಕೊಟ್ಟಿದ್ದನು. ಬಂಗಾರಪೇಟೆ ಸುತ್ತಮುತ್ತ ಸುಮಾರು ಸಾವಿರ ವಸತಿ ನಿವೇಶನಗಳನ್ನು ಮಾರಾಟಕ್ಕೆ ಅಭಿವೃದ್ಧಿಪಡಿಸಿದ್ದನು. ಅಲ್ಲದೆ ಬೆಂಗಳೂರು ಮತ್ತು ತಮಿಳು ನಾಡುಗಳಲ್ಲಿ ಆಸ್ತಿ ಕೂಡ ಹೊಂದಿದ್ದನು. ನಮಗೆ ಹಣ ಬರಬೇಕಿರುವುದರಿಂದ ಆತನ ಆಸ್ತಿಯನ್ನು ಹರಾಜಿಗಿಟ್ಟು ಹೂಡಿಕೆದಾರರಿಗೆ ಹಣ ಹಿಂತಿರುಗಿಸುವಂತೆ ಇಲಾಖೆಗಳಿಗೆ ಕೇಳಿಕೊಳ್ಳುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕ ಬಡ್ಡಿ ಮೊತ್ತಕ್ಕೆ ಜನರಿಂದ ಹಣ ಪಡೆದು ತಂದೆ-ಮಗ 500 ಕೋಟಿ ರೂಪಾಯಿಗೂ ಅಧಿಕ ವಂಚಿಸಿದ್ದಾರೆ. ಆರಂಭದಲ್ಲಿ ನಿಯಮಿತವಾಗಿ ಬಡ್ಡಿ ನೀಡಿ ಹೂಡಿಕೆದಾರರ ವಿಶ್ವಾಸ ಗಳಿಸಿಕೊಂಡರು. ನಂತರ ಹೆಚ್ಚು ಮಂದಿ ಹೂಡಿಕೆ ಮಾಡುತ್ತಿದ್ದಂತೆ ಬಡ್ಡಿ ಮೊತ್ತವನ್ನು ಹಿಂತಿರುಗಿಸದೆ ಸ್ವಲ್ಪ ಸಮಯ ಕಳೆದ ನಂತರ ಮೂಲ ಮೊತ್ತವನ್ನು ಸಹ ನೀಡುವುದನ್ನು ನಿಲ್ಲಿಸಿದರು. ನೋಟುಗಳ ಅಪನಗದೀಕರಣ ನಂತರ ಹೂಡಿಕೆದಾರರಿಗೆ ಚೆಕ್ ನೀಡುತ್ತಿದ್ದರು. ಆದರೆ ಅದು ಬೌನ್ಸ್ ಆಗುತ್ತಿತ್ತು. ಹೀಗೆ ಹಲವರು ತಂದೆ-ಮಗನ ವಿರುದ್ಧ ದೂರು ನೀಡಿದ್ದಾರೆ. ಕೆಲವು ಹೂಡಿಕೆದಾರರು ಇತ್ತೀಚೆಗೆ ಮುಖ್ಯಮಂತ್ರಿಯವರನ್ನು ಸಹ ಭೇಟಿ ಮಾಡಿ ಸಹಾಯ ಕೋರಿದ್ದಾರೆ ಎಂದು ಪೊಲೀಸರು ಹೇಳುತ್ತಾರೆ.