ಬೆಂಗಳೂರು: ಕೃಷಿ ವಿಶ್ವವಿದ್ಯಾಲದ ಆವರಣದಲ್ಲಿ ನಾಲ್ಕು ದಿನಗಳಿಂದ ನಡೆದ ಕೃಷಿ ಮೇಳಕ್ಕೆ ತೆರೆ ಬಿದ್ದಿದೆ. ನಿನ್ನೆ ಒಂದೇ ದಿನ 5.5 ಲಕ್ಷ ಜನರು ಭೇಟಿ ನೀಡಿದ್ದಾರೆ. ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸಹ ಕೃಷಿಮೇಳಕ್ಕೆ ಆಗಮಿಸಿ ಅತ್ಯುತ್ತಮ ಮಳಿಗೆ ಹಾಗೂ ಪ್ರದರ್ಶನಗಳಿಗೆ ಬಹುಮಾನ ವಿತರಿಸಿದರು.
ಕೃಷಿ ವಿಶ್ವವಿದ್ಯಾಲಯದ ಮಾಹಿತಿ ಪ್ರಕಾರ ನಾಲ್ಕು ದಿನಗಳ ಕೃಷಿ ಮೇಳ 13.10 ಲಕ್ಷ ಜನ ಭೇಟಿ ನೀಡಿದ್ದು, , 750 ಮಳಿಗೆಗಳಿಂದ ದಾಖಲೆ ಪ್ರಮಾಣದಲ್ಲಿ 5 ಕೋಟಿ 82 ಲಕ್ಷ ರೂಪಾಯಿ ವ್ಯವಹಾರ ಆಗಿದೆ.
ಈ ಬಾರಿಯ ಕೃಷಿ ಮೇಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದು ಕೃಷಿ ಯಂತ್ರಗಳು, ನೀರಾವರಿ ಪರಿಕರ, ಸಸ್ಯ ವೈವಿಧ್ಯ, ಸಮಗ್ರ ಕೃಷಿ, ಪಶು, ಕೋಳಿ ಸಾಕಣೆ, ಕೃಷಿ ಉದ್ಯಮ ಕ್ಷೇತ್ರಗಳ ಹೊಸ ಬೆಳವಣಿಗೆಗಳ ಕುರಿತು ಕುತೂಹಲಕರಿ ಮಾಹಿತಿ ವಿನಿಮಯ ಮೇಳದಲ್ಲಿ ನಡೆಯಿತು. ಆಹಾರ ಮಳಿಗೆಗಳಂತೂ ಯಾವಾಗಲೂ ಜನರಿಂದ ತುಂಬಿ ತುಳುಕುತ್ತಿದ್ದವು.
ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಕೃಷಿಯಲ್ಲಿ ಬದಲಾವಣೆ ತರಬೇಕು, ಅದಕ್ಕೆ ರೈತರು ಮಾನಸಿಕವಾಗಿ ಸಿದ್ಧರಾಗಬೇಕು. ಬದಲಾವಣೆಗೆ ತೆರೆದುಕೊಳ್ಳಬೇಕು, ಮುಂದೆ ಪ್ರದೇಶವಾರು ಸರಾಸರಿ ಮಳೆ ಪ್ರಮಾಣ ಅಂದಾಜಿಸಿ ಅದಕ್ಕನುಗುಣವಾಗಿ ಏನು ಬೆಳೆಯಬೇಕು ಎಂಬ ಬಗ್ಗೆ ರೈತರಿಗೆ ಸಲಹೆ ನೀಡುವ ಕಾರ್ಯಕ್ರಮವೂ ಇದೆ ಎಂದರು.