ರಾಜ್ಯ

ರೆಡ್ಡಿ ಆಪ್ತ ಅಲಿಖಾನ್‍ ನಿರೀಕ್ಷಣಾ ಜಾಮೀನು ಅರ್ಜಿ ವಜಾ, ನಂ. 27ರ ವರೆಗೆ ನ್ಯಾಯಾಂಗ ಬಂಧನ

Lingaraj Badiger
ಬೆಂಗಳೂರು: ಆಂಬಿಡೆಂಟ್ ಬಹುಕೋಟಿ ವಂಚನೆ ಪ್ರಕರಣದ ಆರೋಪಿ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಆಪ್ತ ಅಲಿಖಾನ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋರ್ಟ್ ಮಂಗಳವಾರ ವಜಾಗೊಳಿಸಿದೆ.
61ನೇ ಸಿಟಿ ಸಿವಿಲ್ ಕೋರ್ಟ್ ಅಲಿಖಾನ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದು, ಆರೋಪಿ 1ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಶರಣಾಗಿದ್ದಾರೆ. 
ಅಲಿಖಾನ್ ನನ್ನು ವಿಚಾರಣೆ ನಡೆಸಿದ 1ನೇ ಎಸಿಎಂಎಂ ಕೋರ್ಟ್, ಆರೋಪಿಯನ್ನು ನವಂಬರ್ 27ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಈ ವೇಳೆ ಹಾಜರಿದ್ದ ಸಿಸಿಬಿ ಅಧಿಕಾರಿಗಳು, ಹೆಚ್ಚಿನ ವಿಚಾರಣೆಗಾಗಿ ಅಲಿಖಾನ್ ನನ್ನು ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿದರು. ಆದರೆ ಅವರ ಮನವಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿಗಳು, ಈಗಾಗಲೇ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿರುವುದರಿಂದ ಪೊಲೀಸ್ ಕಸ್ಟಡಿ ಕೋರಿ ಮತ್ತೊಂದು ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಿದರು.
ಆಂಬಿಡೆಂಟ್ ವಂಚನೆ ಪ್ರಕರಣದಲ್ಲಿ ಅಲಿಖಾನ್ 4ನೇ ಆರೋಪಿಯಾಗಿದ್ದು, ಈಗಾಗಲೇ ಅವರ ಮನೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಹಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. 
ಅಲಿಖಾನ್ ವಿರುದ್ಧ ಇಡಿ ಹೆಸರಿನಲ್ಲಿ ಡೀಲ್ ಮಾಡಿದ ಆರೋಪ ಮಾಡಲಾಗಿದ್ದು, 18 ಕೋಟಿ ಮೌಲ್ಯದ ಚಿನ್ನ ಪಡೆಯಲಾಗಿದೆ ಎಂದು ಸಿಸಿಬಿ ಪೊಲೀಸರು ಆರೋಪಿಸಿದ್ದಾರೆ. ಈ ಹಿಂದೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಅಲಿಖಾನ್ ಹಣವನ್ನು ಹಿಂದಿರುಗಿಸುವುದಾಗಿ ಹೇಳಿದ್ದ. ಅಲ್ಲದೇ ಈ ಹಣವನ್ನು ಸಾಲದ ರೂಪದಲ್ಲಿ ಪಡೆದಿದ್ದು, ದೇವರ ಹರಕೆ ತೀರಿಸಿಲು ಪಡೆದಿದ್ದಾಗಿ ನ್ಯಾಯಾಲಯಕ್ಕೆ ವಕೀಲರ ಮೂಲಕ ಪ್ರಮಾಣಪತ್ರ ಸಲ್ಲಿಸಿದ್ದಾರೆ.
SCROLL FOR NEXT