ಬೆಂಗಳೂರು: ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶದ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ್ನು ಸ್ವಾಗತಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಅನವಶ್ಯಕವಾಗಿ ಈ ವಿಷಯವನ್ನು ರಾಜಕೀಯಗೊಳಿಸುತ್ತಿದೆ ಎಂದು ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಲಾಭ ಪಡೆಯಲು ಬಿಜೆಪಿ ಇಂತಹ ಸೂಕ್ಷ್ಮ ವಿಚಾರಗಳಲ್ಲಿ ಜನರನ್ನು ವಿಭಜನೆ ಮಾಡಲು ನೋಡುತ್ತಿದೆ. ಸಾಮಾಜಿಕ ನ್ಯಾಯದ ಕಡೆಗೆ ಬಿಜೆಪಿ ಬದ್ಧವಾಗಿಲ್ಲ. ತ್ರಿವಳಿ ತಲಾಖ್ ವಿರುದ್ಧ ಸುಪ್ರೀಂ ಕೋರ್ಟ್ ಆದೇಶವನ್ನು ಸ್ವಾಗತಿಸಿದ್ದ ಬಿಜೆಪಿ ಅಯ್ಯಪ್ಪ ದೇವಸ್ಥಾನಕ್ಕೆ ಪ್ರವೇಶ ವಿಚಾರ ಬಂದಾಗ ಏಕೆ ವಿರೋಧಿಸುತ್ತಿದೆ ಎಂದು ಪ್ರಶ್ನಿಸಿದರು.
ಪ್ರತಿಯೊಬ್ಬರಿಗೂ ತಮ್ಮ ಆಯ್ಕೆಯ ದೇವಸ್ಥಾನಕ್ಕೆ ಹೋಗುವ ಸ್ವಾತಂತ್ರ್ಯವಿದೆ, ದೇವರ ವಿಚಾರದಲ್ಲಿ ಲಿಂಗ ತಾರತಮ್ಯವಿಲ್ಲ, ದೇವರು ಮಹಿಳೆ ಮತ್ತು ಪುರುಷರಿಗೆ ಬೇರೆ ಬೇರೆಯೇ ಎಂದು ಕೇಳಿದರು.
ದೇಶದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದ ಸಿದ್ದರಾಮಯ್ಯ, ದೇವರು, ದಿಂಡಿರು ಹೆಸರಿನಲ್ಲಿ ಸೂಕ್ಷ್ಮ ವಿಷಯಗಳನ್ನು ರಾಜಕೀಯಕರಣಗೊಳಿಸುವ ಮೂಲಕ ಸಮುದಾಯಗಳ ಮಧ್ಯೆ ಭಿನ್ನಾಭಿಪ್ರಾಯದ ಬೀಜ ಬಿತ್ತುತ್ತಿದೆ ಎಂದು ಹೇಳಿದರು.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಿಸಿದ ಅವರು, ತಿಂಗಳಲ್ಲಿ ಕೊನೆ ಭಾನುವಾರ ಮನ್ ಕಿ ಬಾತ್ ಎಂದು ರೇಡಿಯೊದಲ್ಲಿ ಮಾತನಾಡುವ ಪ್ರಧಾನಿ ಸಂಸತ್ತಿನಲ್ಲಿ ಮಾತನಾಡುವುದಿಲ್ಲ, ಅಧಿಕ ಜಿಎಸ್ ಟಿಯಂತಹ ನೀತಿಗಳಿಂದ ಇಂದು ನಮ್ಮ ದೇಶದಲ್ಲಿ ಅನೇಕ ಜನರು ಮತ್ತು ಉದ್ಯಮಗಳು ಸಂಕಷ್ಟಕ್ಕೊಳಗಾಗಿವೆ ಎಂದರು.