ಬೆಂಗಳೂರು: ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಇನ್ನು ಮುಂದೆ ತಮ್ಮ ವಾಹನಗಳನ್ನು ಕಾಲೇಜಿಗೆ ತಾರದೇ ಮನೆಯಲ್ಲಿ ಬಿಟ್ಟುಬರಬೇಕಾದ ಪರಿಸ್ಥಿತಿ ಬರಬಹುದು. ಸಾರ್ವಜನಿಕ ಸಾರಿಗೆಯನ್ನು ಬಳಸುವಂತೆ ಪ್ರೇರೇಪಿಸಲು ಮತ್ತು ಕಾಲೇಜು ಕ್ಯಾಂಪಸ್ ಗಳಲ್ಲಿ ವಾಹನಗಳ ಸಂಖ್ಯೆ ತುಂಬಿ ತುಳುಕುವುದನ್ನು ನಿಯಂತ್ರಿಸಲು ಖಾಸಗಿ ವಾಹನಗಳನ್ನು ತಾರಬಾರದು ಎಂದು ಸರ್ಕಾರ ಆದೇಶ ಹೊರಡಿಸುವ ಸಾಧ್ಯತೆಯಿದೆ.
ಉನ್ನತ ಶಿಕ್ಷಣ ಸಚಿವ ಜಿ ಟಿ ದೇವೇಗೌಡ ಈ ವಿಚಾರ ಕುರಿತು ಕಾಲೇಜಿನ ವ್ಯವಸ್ಥಾಪಕರೊಂದಿಗೆ ಸದ್ಯದಲ್ಲಿಯೇ ಮಾತುಕತೆ ನಡೆಸಲಿದ್ದಾರೆ. ವಾಯುಮಾಲಿನ್ಯ ಮತ್ತು ಅಪಘಾತ ಸಂಖ್ಯೆಯನ್ನು ತಗ್ಗಿಸುವುದು ಕೂಡ ಈ ಪ್ರಸ್ತಾವನೆಯ ಹಿಂದಿನ ಉದ್ದೇಶವಾಗಿದೆ.
ರಾಜ್ಯದ ಎಲ್ಲಾ ಸರ್ಕಾರಿ, ಖಾಸಗಿ ಮತ್ತು ಅನುದಾನಿತ ವಿಶ್ವವಿದ್ಯಾಲಯಗಳ ಉಪ ಕುಲಪತಿಗಳೊಂದಿಗೆ ಹಾಗೂ ಖಾಸಗಿ ವೃತ್ತಿಪರ ಕೋರ್ಸ್ ಗಳ ವ್ಯವಸ್ಥಾಪಕ ಮಂಡಳಿಯ ಪ್ರತಿನಿಧಿಗಳ ಜೊತೆ ಸಭೆ ನಡೆಸುವ ಸಾಧ್ಯತೆಯಿದೆ.
ಉನ್ನತ ಶಿಕ್ಷಣ ಇಲಾಖೆಯ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಅನೇಕ ಉನ್ನತ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಗಮನಿಸಿ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗುತ್ತಿದೆ.
ಕಾಲೇಜು ವಿದ್ಯಾರ್ಥಿಗಳು ಬೈಕ್, ಕಾರನ್ನು ನಿತ್ಯ ಬಳಸುವುದರಿಂದ ವೆಚ್ಚ ಜಾಸ್ತಿಯಾಗುತ್ತದೆ. ಪ್ರತಿ ವಿದ್ಯಾರ್ಥಿ ಸುಮಾರು 5 ಸಾವಿರ ವೆಚ್ಚ ಮಾಡುತ್ತಾನೆ. ಇದರ ಬದಲು ವಿದ್ಯಾರ್ಥಿಗಳಿಗೆ ಕಾಲೇಜಿನಿಂದಲೇ ಸಾರಿಗೆ ವ್ಯವಸ್ಥೆ ನೀಡಬಹುದಲ್ಲವೇ ಎಂದು ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಕೇಳುತ್ತಾರೆ.