ಬೆಂಗಳೂರು: ಇತ್ತೀಚೆಗೆ ಶತಕವೀರ ಸರಗಳ್ಳ ನನ್ನು ಸೆರೆ ಹಿಡಿದು ಬೈಕ್ ಬಹುಮಾನ ಪಡೆದುಕೊಂಡಿದ್ದ ಜ್ಞಾನಭಾರತಿ ಠಾಣೆಯ ಮುಖ್ಯ ಪೇದೆ ಚಂದ್ರಕುಮಾರ್ ಅವರು, ತನ್ನ ಪರಿಚಿತ ಗೃಹ ರಕ್ಷಕ ದಳದ ಮಹಿಳಾ ಸಿಬ್ಬಂದಿ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇರೆಗೆ ಸೋಮವಾರ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾರೆ.
ನಂದಿನಿ ಲೇಔಟ್ ಠಾಣಾ ವ್ಯಾಪ್ತಿಯ ನಿವಾಸಿ 27 ವರ್ಷದ ಸಂತ್ರಸ್ತೆ ನೀಡಿದೆ ದೂರಿನ ಮೇರೆಗೆ ಚಂದ್ರಕುಮಾರ್ ಅವರನ್ನು ಬಂಧಿಸಿದ ಪೊಲೀಸರು, ಸೋಮವಾರ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ.
ಮೂರು ದಿನಗಳ ಹಿಂದೆ ಕರ್ತವ್ಯ ಮುಗಿಸಿದ ಬಳಿಕ ಸಂತ್ರಸ್ತೆಯ ಮನೆಗೆ ನುಗ್ಗಿ ಆರೋಪಿ ಈ ಕೃತ್ಯ ಎಸಗಿದ್ದಾನೆಂದು ದೂರಿನಲ್ಲಿ ಹೇಳಿಕೊಳ್ಳಲಾಗಿದೆ.
ಒಂದೇ ಕಡೆ ಕೆಲಸ ಮಾಡುತ್ತಿದ್ದರಿಂದ ಗೃಹ ರಕ್ಷಕ ಸಿಬ್ಬಂದಿಗೆ ಮುಖ್ಯ ಪೇದೆ ಚಂದ್ರಕುಮಾರ್ ಅವರ ಪರಿಚಯವಿತ್ತು. ಈ ಗೆಳೆತನದಲ್ಲೇ ನ.2 ರಂದು ಜ್ಞಾನಭಾರತಿ ವಿಶ್ವವಿದ್ಯಾಲಯದ ಆವರಣದಲ್ಲಿ ಭದ್ರತಾ ಕರ್ತವ್ಯ ಮುಗಿಸಿದ ಬಳಿಕ ಆಕೆಯನ್ನು ಮನೆಗೆ ಚಂದ್ರಕುಮಾರ್ ಡ್ರಾಪ್ ಮಾಡಿದ್ದ. ಹೀಗೆ ಅವರಿಬ್ಬರ ಮಧ್ಯೆ ಆತ್ಮೀಯತೆ ಮೂಡಿತ್ತು ಎಂದು ಹೇಳಲಾಗುತ್ತಿದೆ.
ಇದಾದ ನಂತರ ನ.16ರ ರಾತ್ರಿ 8.15ರ ಸುಮಾರಿಗೆ ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ಗೃಹ ರಕ್ಷಕ ಸಿಬ್ಬಂದಿಯನ್ನು ಅಡ್ಡಗಟ್ಟಿ ಚಂದ್ರಕುಮಾರ್ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಈ ನಡವಳಿಕೆಯಿಂದ ಬೇಸರಗೊಂಡ ಸಂತ್ರಸ್ತೆ, ಪೇದೆ ವಿರುದ್ಧ ಮೌಖಿಕ ದೂರು ನೀಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು, ಇಬ್ಬರಿಗೂ ಬುದ್ಧಿವಾದ ಹೇಳಿದ್ದರು. ಅಲ್ಲದೆ, ಮತ್ತೆ ಈ ರೀತಿ ವರ್ತನೆ ತೋರಿದರೆ, ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದರು.
ದೂರು ಕೊಟ್ಟಿದ್ದರಿಂದ ತೀವ್ರವಾಗಿ ಕೆಂಡಾಮಂಡಲಗೊಂಡಿದ್ದ ಚಂದ್ರಶೇಖರ್ ಅಂದು ರಾತ್ರಿ 9.30ರ ಸುಮಾರಿಗೆ ಗೃಹ ರಕ್ಷಕಿ ಮನೆಗೆ ತೆರಳಿ ಆಕೆ ಮೇಲೆ ಅತ್ಯಾಚಾರವೆಸಗಿದ್ದಾನೆ. ವಿವಾಹಿತೆಯಾದ ಸಂತ್ರಸ್ತೆ, ಪತಿ ಬಂದಿರಬೇಕು ಎಂದು ಬಾಗಿಲು ತೆರೆದಾಗ ಬಲವಂತವಾಗಿ ಒಳ ಪ್ರವೇಶಿಸಿದ ಆರೋಪಿ, ಆಕೆಯ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದಾನೆಂದು ಆರೋಪಿಸಲಾಗಿದೆ.