ಬೆಂಗಳೂರು: ಓಎಲ್ ಎಕ್ಸ್ ನಲ್ಲಿ ಕಾರು ಮಾರಾಟಕ್ಕಿಟ್ಟಿದ್ದ ಬೆಂಗಳೂರು ಟೆಕ್ಕಿ ಅಜಿತಾಬ್ ನಿಗೂಢ ಕಣ್ಮರೆ ಪ್ರಕರಣ ಸಂಬಂಧ ಚೆನ್ನೈನ ಸಿಬಿಐ ಪೋಲೀಸರು ಗುರುವಾರ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.
ಕಳೆದ ವರ್ಷ ಡಿಸೆಂಬರ್ ನಲ್ಲಿ ಕಾಣೆಯಾಗಿದ್ದ ಟೆಕ್ಕಿ ಕುಮಾರ್ ಅಜಿತಾಬ್ ಕುರಿತಂತೆ ಬೆಂಗಳೂರು ವೈಟ್ ಫೀಲ್ಡ್ ಠಾಣೆಯಲ್ಲಿ ಪ್ರಕರಣ್ ಅದಾಖಲಾಗಿತ್ತು. ನಾಪತ್ತೆಯಾದ ಟೆಕ್ಕಿಯ ಶೋಧಕ್ಕಾಗಿ ವಿಶೇಷ ತನಿಖಾ ತಂಡ ಸಹ ರಚನೆಯಾಗಿದ್ದರೂ ಸಹ 11 ತಿಂಗಳ ಬಳಿಕವೂ ಆತ ಪತ್ತೆಯಾಗಿಲ್ಲ. ಅಲ್ಲದೆ ಟೆಕ್ಕಿ ಬಗೆಗೆ ಯಾವೊಂದು ಸಣ್ಣ ಸುಳಿವು ಸಹ ದೊರಕಿಲ್ಲ.
ಅಜಿತಾಬ್ ಪೋಷಕರು ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದು ಹೈಕೋರ್ಟ್ ಮೊರೆ ಹೋಗಿದ್ದು ಮಾತ್ರವಲ್ಲದೆ ಪ್ರಧಾನಿ, ಗೃಹ ಸಚಿವರಿಗೆ ಸಹ ಮನವಿ ಮಾಡಿದ್ದರು.
ಕಡೆಗೆ ಕರ್ನಾಟಕ ಹೈಕೋರ್ಟ್ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ತೀರ್ಪು ನೀಡಿತು. ಈಗ ನ್ಯಾಯಾಲಯದ ಆದೇಶದಂತೆ ಚೆನ್ನೈನ ಸಿಬಿಐ ಕಛೇರಿಯಲ್ಲಿ ಅಜಿತಾಬ್ ನಾಪತ್ತೆ ಸಂಬಂಧ ಪ್ರಕರಣ ದಾಖಲಾಗಿದೆ.
ಬೆಳ್ಳಂದೂರಿನ ಬ್ರಿಟೀಷ್ ಟೆಲಿಕಾಂ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಅಜಿತಾಬ್ ಬಿಹಾರ ಮೂಲದವರಾಗಿದ್ದು ನ್ನ ಸಿಯಾಜ್ ಕಾರನ್ನು ಮಾರಾಟ ಮಾಡುವುದಕ್ಕೆ ಓಎಲ್ ಎಕ್ಸ್ ನಲ್ಲಿ ಜಾಹೀರಾತು ಪ್ರಕಟಿಸಿದ್ದರು. ಕಳೆದ ಡಿಸೆಂಬರ್ 18ರಂದು ಅಜಿತಾಬ್ ಗ್ರಾಹಕರೊಬ್ಬರಿಗೆ ತನ್ನ ಕಾರ್ ತೋರಿಸಲೆಂದು ಹೋದವರು ಹಿಂತಿರುಗಿಲ್ಲ.ಅಂದಿನಿಂದ ಇಂದಿನವರೆಗೆ ಅವರು ಎಲ್ಲಿದ್ದಾರೆಂದು ಪತ್ತೆಯಾಗಿಲ್ಲ.