ರಾಜ್ಯ

ಅಂಬರೀಷ್ ವಿಧಿವಶ: ಕಂಠೀರವ ಸ್ಟೇಡಿಯಂನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ, ಬಿಗಿ ಬಂದೋಬಸ್ತ್

Nagaraja AB

ಬೆಂಗಳೂರು: ವಿಕ್ರಮ್ ಆಸ್ಪತ್ರೆಯಲ್ಲಿ ಕಳೆದ ರಾತ್ರಿ  ಹೃದಯಾಘಾತದಿಂದ  ವಿಧಿವಶರಾದ ರೆಬೆಲ್ ಸ್ಟಾರ್ ಅಂಬರೀಷ್ (66) ಅವರ ಪಾರ್ಥಿವ ಶರೀರವನ್ನು ಕಂಠೀರವ ಕ್ರೀಡಾಂಗಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಚಾಮರಾಜಪೇಟೆಯ ಕಲಾವಿದರ ಸಂಘದಿಂದ ಕಂಠೀರವ ಕ್ರೀಡಾಂಗಣಕ್ಕೆ ಪಾರ್ಥಿವ ಶರೀರವನ್ನು ರವಾನಿಸಲಾಗಿದ್ದು, ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಂದು ಇಡೀ ದಿನ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಕಂಠೀರವ ಕ್ರೀಡಾಂಗಣದಲ್ಲಿನ ಗೇಟ್ ನಂಬರ್ 1 ರ ಮೂಲಕ ವಿಐಪಿಗಳ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.  ವಿಐಪಿಗಳು ಈ ಗೇಟ್ ಮೂಲಕವೇ ಆಗಮಿಸಿ, ನಿರ್ಗಮಿಸಬಹುದಾಗಿದೆ. ಗೇಟ್ ನಂಬರ್ 2 ಮತ್ತು 3 ರಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.  ಗೇಟ್ ನಂಬರ್ 2 ಮತ್ತು 3ರಲ್ಲಿ ತೆರಳಿ 4 ಮತ್ತು 5 ರಲ್ಲಿ ನಿರ್ಗಮಿಸಬಹುದಾಗಿದೆ.

ಸ್ಟೇಡಿಯಂ ಸುತ್ತಮುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಭದ್ರತೆಗಾಗಿ ಸುಮಾರು 2 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ.ಮಂಡ್ಯದಿಂದ ಬರುವ ಅಭಿಮಾನಿಗಳಿಗಾಗಿ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ.

ಕಂಠೀರವ ಸ್ಟೇಡಿಯಂಗೆ ಬರುವವರ ವಾಹನಗಳ ಅನುಕೂಲಕ್ಕಾಗಿ  ಕಬ್ಬನ್ ಪಾರ್ಕ್, ಶಿವಾಜಿನಗರ ಬಸ್ ನಿಲ್ದಾಣ, ಸೆಂಟ್ ಜೋಸೆಪ್ ಕಾಲೇ ಜ್ ಮೈದಾನ, ಸರ್ಕಾರಿ ಕಲಾ, ಕಾಲೇಜ್, ಸೆಂಟ್ರಲ್ ಕಾಲೇಜ್ ಮೈದಾನದಲ್ಲಿ ಪಾರ್ಕಿಂಗ್  ವ್ಯವಸ್ಥೆ ಮಾಡಲಾಗಿದೆ.

ನಾಳೆ  ಕಂಠೀರವ ಸ್ಟುಡಿಯೋದಲ್ಲಿ ವರನಟ ಡಾ. ರಾಜ್ ಕುಮಾರ್ ಸ್ಮಾರಕ ಪಕ್ಕದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂಬರೀಷ್ ಅಂತಿಮ ಸಂಸ್ಕಾರ ನಡೆಯಲಿದೆ.

SCROLL FOR NEXT