ಬೆಂಗಳೂರು: ಅಪಾರ ಅಭಿಮಾನಿಗಳನ್ನು ಹೊಂದಿರುವ ಮಂಡ್ಯದ ಗಂಡು ಎಂದೇ ಜನಪ್ರಿಯವಾಗಿರುವ ಅಂಬರೀಷ್ ಅವರ ಅಂತಿಮ ದರ್ಶನದ ವಿಶೇಷ ಅವಕಾಶವನ್ನು ನೀಡಬೇಕೆಂದು ಮಂಡ್ಯದ ಅವರ ಅಭಿಮಾನಿಗಳ ಬೇಡಿಕೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಇಂದು ಬೆಳಗ್ಗೆ ಕಂಠೀರವ ಸ್ಟೇಡಿಯಂನಲ್ಲಿ ಅಂಬರೀಷ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬರೀಶ್ ಅವರ ಬಗ್ಗೆ ಅಭಿಮಾನಿಗಳು ಮಂಡ್ಯಗೆ ಪಾರ್ಥಿವ ಶರೀರ ತರಲು ಒತ್ತಾಯಿಸಿದ್ದಾರೆ. ನಿನ್ನೆ ಅವರ ಮನೆಯವರು ಮತ್ತು ಬಂಧುಗಳೊಂದಿಗೆ ಸೇರಿ ಚರ್ಚೆ ಮಾಡಿದ್ದೇವೆ ಎಂದರು.
ಶಾಸ್ತ್ರೋಕ್ತವಾಗಿ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋದ ನಂತರ ವಾಪಸ್ಸು ತರುವುದು ಸರಿಯಲ್ಲ, ಮಂಡ್ಯಕ್ಕೆ ರಸ್ತೆ ಮೂಲಕ ಕಳೇಬರವನ್ನು ತೆಗೆದುಕೊಂಡು ಹೋದರೆ ಅನನುಕೂಲವಾಗುತ್ತದೆ. ಹೀಗಾಗಿ ವಿಮಾನದಲ್ಲಿ ಅಥವಾ ಹೆಲಿಕಾಪ್ಟರ್ ಮೂಲಕ ತೆಗೆದುಕೊಂಡು ಹೋಗಲು ಸಾಧ್ಯವಿದೆಯೇ ಎಂಬ ಬಗ್ಗೆ ಯೋಚಿಸುತ್ತಿದ್ದೇವೆ. ಇದಕ್ಕಾಗಿ ಕೇಂದ್ರ ರಕ್ಷಣಾ ಇಲಾಖೆಯ ಅನುಮತಿ ಪಡೆಯಲು ನಾನೇ ಖುದ್ದಾಗಿ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದ್ದೇನೆ, ಅವರು ಸ್ವಲ್ಪ ಸಮಯ ಅವಕಾಶ ಕೇಳಿದ್ದಾರೆ. ಈ ಬಗ್ಗೆ ಎಲ್ಲಾ ಸಾಧ್ಯತೆಗಳನ್ನು ಸರ್ಕಾರ ಪರಿಶೀಲಿಸುತ್ತದೆ. ಏರ್ ಲಿಫ್ಟ್ ಮೂಲಕ ಸಾಧ್ಯವಾದರೆ ಅಂಬರೀಷ್ ಅವರ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ಇಂದು ಸಂಜೆ ವರ್ಗಾಯಿಸಿ ನಾಳೆ ಬೆಳಗ್ಗೆವರೆಗೆ ಮಂಡ್ಯದ ವಿಶ್ವೇಶ್ವರಯ್ಯ ಸ್ಟೇಡಿಯಂನಲ್ಲಿ ಇಡಲಾಗುವುದು ಎಂದು ಹೇಳಿದರು.
ರಕ್ಷಣಾ ಇಲಾಖೆಯ ಹೆಲಿಕ್ಯಾಪ್ಟರ್ ನಮಗೆ ಸಿಕ್ಕಿದರೆ ಮಂಡ್ಯಕ್ಕೆ ಪಾರ್ಥೀವ ಶರೀರವನ್ನು ಒಯ್ದು ವಿಶ್ವೇಶ್ವರ ಸ್ಟೇಡಿಯಂನಲ್ಲಿ ಇಂದು ಸಂಜೆ 4 ಗಂಟೆಯಿಂದ ನಾಳೆ ಬೆಳಗ್ಗೆ 6 ಗಂಟೆಯ ವರೆಗೆ ಅಂತಿಮ ದರ್ಶನ ಪಡೆಯಲು ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಲು ಸಿದ್ದತೆ ನಡೆಸಿದ್ದೇವೆ ಎಂದರು.
ಮಂಡ್ಯದಲ್ಲಿ ಯಾರೂ ಆಕ್ರೋಶ ವ್ಯಕ್ತಪಡಿಸುವುದು ಬೇಡ. ಅವರು ಅಜಾತ ಶತ್ರು, ಅವರ ಪ್ರೀತಿ ವಿಶ್ವಾಸದ ಜೀವನ ನಮ್ಮೊಂದಿಗೆ ಇದೆ. ಯಾರೂ ಅನ್ಯತಾ ಭಾವಿಸಬೇಡಿ, ಈ ವಿಷಯದಲ್ಲಿ ಸರ್ಕಾರದೊಂದಿಗೆ ಸಹಕರಿಸಿ, ಯಾರೂ ಸಿಟ್ಟು, ಆಕ್ರೋಶಗಳಿಂದ ಸಾರ್ವಜನಿಕ ಆಸ್ತಿಪಾಸ್ತಿ ನಾಶ ಮಾಡುವುದು, ಸಾರ್ವಜನಿಕರಿಂದ ತೊಂದರೆ ಮಾಡಬೇಡಿ. ನೆಚ್ಚಿನ ನಾಯಕನನ್ನು ಪ್ರೀತಿಯಿಂದ ಅಂತಿಮವಾಗಿ ಶಿಸ್ತು, ಗೌರವಗಳಿಂದ ಕಳುಹಿಸಿಕೊಡುವುದೇ ಅವರಿಗೆ ನಾವು ನೀಡುವ ಗೌರವ ಎಂದರು.
ನಾಳೆ ಬೆಳಿಗ್ಗೆ 6 ಗಂಟೆಯಿಂದ ಏಳೂವರೆಯವರೆಗೆ ರಾಹುಕಾಲವಿದೆ. ನಂತರ ಮತ್ತೆ ಬೆಂಗಳೂರು ಕಂಠೀರವ ಸ್ಟೇಡಿಯಂಗೆ ಕರೆತಂದು ಮೆರವಣಿಗೆ ಮೂಲಕ ಕಂಠೀರವ ಸ್ಟುಡಿಯೋಗೆ ತರಲಾಗುವುದು. ಅಲ್ಲಿ ಎಡಭಾಗದಲ್ಲಿ ಡಾ ರಾಜ್ ಸಮಾಧಿಯಿದೆ. ಬಲ ಭಾಗದಲ್ಲಿ ಒಂದೂವರೆ ಎಕರೆ ಭೂಮಿಯಿದೆ. ಅಲ್ಲಿ ಅಂಬರೀಷ್ ಅಂತ್ಯಕ್ರಿಯೆ ನಡೆಸುವ ಬಗ್ಗೆ ಸರ್ಕಾರ ನಿರ್ಧಾರ ಮಾಡಲಿದೆ ಎಂದು ಕೂಡ ಸಿಎಂ ಕುಮಾರಸ್ವಾಮಿ ಹೇಳಿದರು.