ಬೆಂಗಳೂರು: 2 ಶತಕಕ್ಕೂ ಹೆಚ್ಚು ಸಿನಿಮಾಗಳ ಅದ್ಭುತ ನಟನೆ ಹಾಗೂ ಅದಕ್ಕೂ ಮೀರಿದ ಮಾನವೀಯ ನಡವಳಿಕೆ ಮೂಲಕ ಜನರ ಮನ ಗೆದ್ದು ಚಿರ ನಿದ್ರೆಗೆ ಜಾರಿರುವ ಮಂಡ್ಯದ ಗಂಡು, ಕಲಿಯುಗದ ಕರ್ಣನಿಗೆ ಲಕ್ಷಾಂತರ ಜನರು ಅಂತಿಮ ನಮನ ಸಲ್ಲಿಸುತ್ತಿದ್ದು, ಸೋಮವಾರ ಮಧ್ಯಾಹ್ನನ 1ರ ಬಳಿಕ ಅಂತ್ಯಕ್ರಿಯೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿದುಬಂದಿದೆ.
ಶನಿವಾರ ಇಹಲೋಕ ತ್ಯಜಿಸಿದ ಅಂಬರೀಷ್ ಅವರ ಪಾರ್ಥೀವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿದ್ದ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಮೌನರಾಗ ಮನೆ ಮಾಡಿತ್ತು. ತಮ್ಮ ಪಾಳೇಗಾರನ ಕಳೆದುಕೊಂಡ ಅಭಿಮಾನಿಗಳ ಮನಸ್ಸುಗಳು ದುಃಖಿಸಿದವು. ರಾಜಕೀಯ, ಚಿತ್ರರಂಗ ಸೇರಿದಂತೆ ವಿವಿಧ ಕ್ಷೇತ್ರಗಳ ನಾನಾ ಗಣ್ಯರು, ಮಹನೀಯರು, ಮಠಾಧೀಶರು, ಲಕ್ಷಾಂತರ ಅಭಿಮಾನಿಗಳು, ಹಿತೈಷಿಗಳು, ಬೆಂಬಲಿಗರು, ಸ್ನೇಹಿತರು ಭಾನುವಾರ ಅಂತಿಮ ನಮನ ಸಲ್ಲಿಸಿದರು.
ನಗರದ ಕಂಠೀರವ ಕ್ರೀಡಾಂಗಣದಲ್ಲಿ ಬೆಳಿಗ್ಗೆ 7.30ರಿಂದ ಮಧ್ಯಾಹ್ನ 3.40ರ ವರೆಗೂ ಸಾರ್ವಜನಿಕ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಬಳಿಕ ಪಾರ್ಥಿವ ಶರೀರವನ್ನು ವಿಶೇಷ ಆ್ಯಂಬುಲೆನ್ಸ್ ಮೂಲಕ ಹೆಚ್ಎಎಲ್ ವಿಮಾನಕ್ಕೆ ಕೊಂಡೊಯ್ದು, ಅಲ್ಲಿದಂ ಭಾರತೀಯ ಸೇನೆಯ ಹೆಲಿಕಾಪ್ಟರ್ ಮೂಲಕ ಮಂಡ್ಯಕ್ಕೆ ಸಾಗಿಸಲಾಯಿತು.
ಅಲ್ಲಿ ಸೋಮವಾರ ಬೆಳಿಗ್ಗೆ 9 ಗಂಟೆಯವರೆಗೂ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ನೀಡಲಿದ್ದು, ನಂತರ ಬೆಂಗಳೂರಿಗೆ ವಾಪಸ್ ಕರೆ ತರಲಾಗುತ್ತದೆ. ಮಧ್ಯಾಹ್ನ 2ಗಂಟೆಗೆ ನಗರದ ಹೊರ ವರ್ತುಲ ರಸ್ತೆಯ ಕಂಠೀರವ ಸ್ಟುಡಿಯೋದ ಆವರಣದಲ್ಲಿ ವರನಟ ಡಾ.ರಾಜ್ ಕುಮಾರ್ ಅವರ ಸಮಾಧಿ ಪಕ್ಕದಲ್ಲಿಯೇ ಅಂಬರೀಷ್ ಅವರ ಅಂತ್ಯ ಸಂಸ್ಕಾರ ಒಕ್ಕಲಿಗೆ ಸಂಪ್ರದಾಯದಂತೆ ನೆರವೇರಲಿದೆ.