ಅಯೋಧ್ಯೆ ರಾಮ ಮಂದಿರ ವಿವಾದ: ನಮ್ಮ ತಾಳ್ಮೆಯನ್ನು ಪರೀಕ್ಷಿಸದಿರಿ- ಕೇಂದ್ರಕ್ಕೆ ಶ್ರೀಗಳ ಎಚ್ಚರಿಕೆ
ಮಂಗಳೂರು: ಹಿಂದು-ಮುಸ್ಲಿಂ ಮೈತ್ರಿಗೆ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಹೊಸ ಅವಕಾಶ. ಸುಪ್ರೀಂಕೋರ್ಟ್ ನಲ್ಲಿ ಅಥವಾ ಹೊರಗೆ ಸಂಧಾನ ಮೂಲಕವಾದರೂ ಆಗಬಹುದು, ಆದರೆ, ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಬೃಹತ್ ಜನಾಗ್ರಹ ಸಭೆ ಒಕ್ಕೊರಲಿನ ಹಕ್ಕೊತ್ತಾಯ ಮಾಡಿದೆ.
ಮಂದಿರ ನಿರ್ಮಾಣ ವಿಚಾರದಲ್ಲಿ ಕೇಂದ್ರ ನಮ್ಮ ತಾಳ್ಮೆಯನ್ನು ಪರೀಕ್ಷಿಸಬಾರದು. ಜೊತೆಗ ಈ ವಿಚಾರದಲ್ಲಿ ಸರ್ಕಾರ ಬದ್ಧತೆ ಪ್ರದರ್ಶಿಸಿ, ಕೊಟ್ಟ ಮಾತನ್ನು ಈಡೇರಿಸಬೇಕೆಂದು ಆಗ್ರಹಿಸಿದ್ದಾರೆ.
ಮಂದಿರ ನಿರ್ಮಾಣಕ್ಕೆ ಅನೇಕ ವರ್ಷಗಳಿಂದ ಹಿಂದೂ ಸಮಾಜ ಕಾಯುತ್ತಲೇ ಇದೆ. ಹೀಗಾಗಿ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಜಾರಿಗೆ ತರಬೇಕು. ಇಲ್ಲವೇ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಸೂದೆ ಜಾರಿಗೆ ತಂದರೂ ಸರಿ ಮಂದಿರ ನಿರ್ಮಾಣ ಮಾಡಬೇಕೆಂದು ನಿನ್ನೆ ಏಕಕಾಲದಲ್ಲಿ ಮಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಪ್ರಮುಖ ಭಾಷಣಕಾರರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮಧ್ಯಪ್ರದೇಶದ ಜಬಲ್ಪುರದ ಮಹಾಮದಲೇಶ್ವರ್ ಅಖಿಲೇಶ್ವರನಂದಗಿರಿ ಮಹಾರಾಜ್ ಅವರು ಮಾತನಾಡಿ, ರಾಮಮಂದಿರದ ಪರ ಅಥವಾ ವಿರುದ್ಧ ಯಾವುದೇ ರೀತಿಯ ಆದೇಶಗಳೇ ಬರಲಿ. ಆದರೆ, ರಾಮ ಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ದೇಶದ ಸಾಧುಗಳು ನಿರ್ಧರಿಸಿದ್ದಾರೆ. ಶಬರಿಮಲೆ ವಿಚಾರದಲ್ಲಿ ಆದೇಶ ನೀಡಿ ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡಿರಬಹುದು. ಆದರೆ, ರಾಮ ಮಂದಿರ ವಿಚಾರದಲ್ಲಿ ಹಾಗಾಗುವುದಿಲ್ಲ ಎಂದು ಹೇಳಿದ್ದಾರೆ.
ಭಾರತದ ಮುಖ್ಯ ನ್ಯಾಯಾಧೀಶರ ವಿಚಾರಣೆ ವಿರುದ್ಧವಿರಬಹುದು. ಆದರೆ, ಸಂವಿಧಾನ ಹಾಗೂ ನ್ಯಾಯಾಂಗದ ವಿರುದ್ಧ ವಿಲ್ಲ. ನ್ಯಾಯಾಲಯದ ಆದೇಶಕ್ಕೂ ಮುನ್ನವೇ ಜಮ್ಮಾ ಮಸೀದಿಯಲ್ಲಿ ಶಿವಲಿಂಗ ಸ್ಥಾಪನೆ ಮಾಡಲು ನಾವು ಮನವಿ ಮಾಡಬಹುದೇ. ಇದನ್ನು ಮುಖ್ಯ ನ್ಯಾಯಮೂರ್ತಿಗಳು ವಿಚಾರಣೆ ನಡೆಸುತ್ತಾರೆಯೇ? ಪ್ರಾಮುಖ್ಯತೆಗಳನ್ನು ಸೂಕ್ತ ರೀತಿಯಲ್ಲಿ ನೀಡಿದಿದ್ದರೆ, ಹೋರಾಟ ಅವರ ವಿರುದ್ಧವಾಗಲಿದೆ ಎಂದು ಎಚ್ಚರಿಸಿದ್ದಾರೆ.
ಅಖಿಲೇಶ್ವರಾನಂದಗಿರಿ ಮಹಾರಾಜ ಸ್ವಾಮೀಜಿಗಳು ಮಾತನಾಡಿ, ಬಿಜೆಪಿ ಹಾಗೂ ಪ್ರಧಾನಮಂತ್ರಿಗಳ ಬದ್ಧಗೆ ಬಗ್ಗೆ ಯಾರೂ ಸಂಶಯ ಪಡಬಾರದು. ಕಾಂಗ್ರೆಸ್ ಒಂದಲ್ಲ ಒಂದು ಸಮಸ್ಯೆಯನ್ನು ತಂದೊಡ್ಡುತ್ತಲೇ ಇದೆ. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಜನರು ಬಿಡಬಾರದು ಎಂದು ಹೇಳಿದ್ದಾರೆ.
ಎರಡೂ ನಗರದಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿಯೂ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರು, ಪ್ರಮುಖ ಸಂತರು ಹಾಗೂ ಸ್ವಾಮೀಜಿಗಳು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.