ಗದಗ: ಅನೇಕ ಹಳ್ಳಿಗಳಲ್ಲಿ ಸರ್ಕಾರಿ ಶಾಲೆಗಳ ಪರಿಸ್ಥಿತಿ ಇಂದಿಗೂ ಶೋಚನೀಯವಾಗಿದೆ. ಗದಗ ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಈ ಶಾಲೆಯ ಒಬ್ಬರೇ ಒಬ್ಬರು ಶಿಕ್ಷಕರು ಮಕ್ಕಳನ್ನು ಬೆಳಗ್ಗೆ ತಮ್ಮ ಬೈಕ್ ನಲ್ಲಿ ಕುಳ್ಳಿರಿಸಿ ಶಾಲೆಗೆ ಕರೆತಂದು ಸಂಜೆ ತಾವೇ ಮನೆಗೆ ಬಿಟ್ಟು ಬರುತ್ತಾರೆ.
ಅಷ್ಟಕ್ಕೂ ಈ ಶಾಲೆಯಲ್ಲಿ ಇರುವ ವಿದ್ಯಾರ್ಥಿಗಳ ಸಂಖ್ಯೆ ಕೇವಲ 3. ಅಧ್ಯಾಪಕರು ಶಾಲೆಗೆ ರಜೆ ಹಾಕಿದರೆ ಮಕ್ಕಳಿಗೆ ಕೂಡ ಅಂದು ರಜೆ. 1, 2 ಮತ್ತು 5ನೇ ತರಗತಿಯಲ್ಲಿ ಒಬ್ಬೊಬ್ಬರು ಮಕ್ಕಳಿದ್ದಾರೆ. ಇದು ಗದಗ ಜಿಲ್ಲೆಯ ನರಗುಂದ ಪಟ್ಟಣದ ಬಂಡೆಮ್ಮ ನಗರದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಪರಿಸ್ಥಿತಿ. ಕೆಲ ವರ್ಷಗಳ ಹಿಂದೆ ಈ ಶಾಲೆಯಲ್ಲಿ ಸಾಕಷ್ಟು ವಿದ್ಯಾರ್ಥಿಗಳಿದ್ದರು. ನಂತರ ಸ್ಥಳೀಯರು ಉದ್ಯೋಗ ಹುಡುಕಿಕೊಂಡು ಬೇರೆ ಕಡೆಗೆ ವಲಸೆ ಹೋಗಲಾರಂಭಿಸಿದ ನಂತರ ಶಾಲೆಯಲ್ಲಿ ಉಳಿದ ವಿದ್ಯಾರ್ಥಿಗಳ ಸಂಖ್ಯೆ ಕೇವಲ 3.
ಶಾಲೆಯ ಶಿಕ್ಷಕ ಹೆಚ್ ಎಸ್ ಸುಂಕದ್ 4 ತಿಂಗಳ ಹಿಂದೆ ನಿಯೋಜನೆ ಮೇರೆಗೆ ಶಾಲೆಗೆ ನೇಮಕಗೊಂಡಿದ್ದರು. ಕೆಲ ವರ್ಷಗಳ ಹಿಂದೆ ಬಂಡೆಮ್ಮ ನಗರದಲ್ಲಿ ಹಲವು ಕುಟುಂಬಗಳು ವಾಸಿಸುತ್ತಿದ್ದವು. ಶಾಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಕೂಡ ಬರುತ್ತಿದ್ದರು. ಆದರೆ ನಂತರದ ದಿನಗಳಲ್ಲಿ ಕೇಂದ್ರ ಸರ್ಕಾರದ ವಸತಿ ಯೋಜನೆಗಳಿಂದ ಹಲವರಿಗೆ ಸರ್ಕಾರದ ಮನೆ ಸಿಕ್ಕಿ ಗ್ರಾಮವನ್ನು ತೊರೆದರು. ಒಬ್ಬರೇ ಶಿಕ್ಷಕರಿರುವುದರಿಂದ ಅಗತ್ಯವಿದ್ದಾಗ ರಜೆ ತೆಗೆದುಕೊಳ್ಳಲು ಕೂಡ ಕಷ್ಟವಾಗುತ್ತದೆ.
'ನಾನು ಈ ಶಾಲೆಗೆ ಬಂದ ಕೂಡಲೇ ಕೇವಲ 3 ಮಕ್ಕಳನ್ನು ನೋಡಿ ಆಶ್ಟರ್ಯಪಟ್ಟೆ. ಕೇವಲ ಮೂರು ಮಕ್ಕಳಿರುವುದರಿಂದ ಅವರನ್ನು ಒಂದೇ ಕಡೆ ಕೂರಿಸಿ ಪಾಠ ಮಾಡುತ್ತೇನೆ. ಮೂರು ಮಕ್ಕಳಲ್ಲಿ ಒಬ್ಬ ಹುಡುಗ ಶಾಲೆ ತೊರೆದು ತನ್ನ ಅಪ್ಪನ ಜೊತೆ ಹಸು ಮೇಯಿಸಲು ಹೋಗಲು ಯೋಜನೆ ಹಾಕಿಕೊಳ್ಳುತ್ತಿದ್ದಾನೆ. ಆದರೆ ಮುಂದೆ ಓದಬೇಕು ಎಂದು ಆತನಿಗೆ ಮತ್ತು ಆತನ ಮನೆಯವರ ಮನೆ ಒಪ್ಪಿಸಿದ್ದೇನೆ ಎನ್ನುತ್ತಾರೆ ಶಿಕ್ಷಕ ಸುಂಕದ್.
ಈ ಬಗ್ಗೆ ಗಮನಹರಿಸಿರುವ ಶಿಕ್ಷಣ ಇಲಾಖೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಸೇರಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಈ ಬಗ್ಗೆ ಸಾರ್ವಜನಿಕ ನಿರ್ದೇಶನ ಉಪ ನಿರ್ದೇಶಕ ಜಿ ಎಲ್ ಬರಟಕ್ಕೆ, ಈ ಬಗ್ಗೆ ಇಲಾಖೆಗೆ ಮಾಹಿತಿ ಸಿಕ್ಕಿದೆ. ನರಗುಂದ ಶಿಕ್ಷಣ ಇಲಾಖೆಗೆ ಸಮೀಕ್ಷೆ ನಡೆಸಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಲು ಸೂಚನೆ ನೀಡಿದ್ದೇವೆ. ವರದಿಗಾಗಿ ಕಾಯುತ್ತಿದ್ದು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಪ್ರಯತ್ನಿಸುತ್ತಿದ್ದೇವೆ. ಶಾಲೆ ಇರುವ ಪ್ರದೇಶಕ್ಕೆ ಸೂಕ್ತ ಸಾರಿಗೆ ವ್ಯವಸ್ಥೆಗೆ ಕೂಡ ಸಾರಿಗೆ ಇಲಾಖೆಗೆ ಮನವಿ ಮಾಡಿದ್ದೇವೆ ಎಂದರು.
ಗದಗ ಜಿಲ್ಲಾ ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷ ಪ್ರಭುರಾಜಗೌಡ ಪಾಟೀಲ್, ಶಾಲೆಯ ಶಿಕ್ಷಕ ಸುಂಕದ್ ಅವರ ಆಸಕ್ತಿ ನಿಜಕ್ಕೂ ಶ್ಲಾಘನೀಯ. ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಪ್ರಯತ್ನಿಸುತ್ತೇವೆ ಎಂದರು.