ಬೆಂಗಳೂರು: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ವರದಿ ಮಾಡಿದ್ದ ಕನ್ನಡ ಸುದ್ದಿ ವಾಹಿನಿ ಟಿವಿ5 ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ವರದಿ ಖಂಡಿಸಿ ಜೆಡಿಎಸ್ ಕಾರ್ಯಕರ್ತರು ಇಂದು ಬೆಂಗಳೂರಿನ ಟಿವಿ5 ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಅಲ್ಲದೆ ಸುಳ್ಳು ಸುದ್ದಿ ಪ್ರಸಾರ ಮಾಡಿದ ಸುದ್ದಿ ವಾಹಿನಿ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಜೆಡಿಎಸ್ ಬೆಂಗಳೂರು ನಗರ ಘಟಕದ ಅಧ್ಯಕ್ಷ ಆರ್ ಪ್ರಕಾಶ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕಾಶ್ ಅವರು ಟಿವಿ5 ವರದಿಗಾರ ಹಾಗೂ ಪ್ರಧಾನ ಸಂಪಾದಕರ ವಿರುದ್ಧ ಹೈಗ್ರೌಂಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಟಿವಿ5 ಕಚೇರಿ ಶೇಷಾದ್ರಿಪುರಂ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವುದರಿಂದ ಪ್ರಕರಣವನ್ನು ಅಲ್ಲಿಗೆ ವರ್ಗಾಯಿಸಲಾಗಿದೆ.
ಶೇಷಾದ್ರಿಪುರಂ ಪೊಲೀಸರು ಜೆಡಿಎಸ್ ಮುಖಂಡನ ದೂರಿನ ಆಧಾರದ ಟಿವಿ5 ವಿರುದ್ಧ ಸೆಕ್ಷನ್ 120ಬಿ, 153 ಹಾಗೂ 505ರಡಿ ಎಫ್ಐಆರ್ ದಾಖಲಿಸಿದ್ದಾರೆ.
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಕುಮಾರಸ್ವಾಮಿ ಅವರು ಬೆಳಗಾವಿ ಅಧಿವೇಶನದ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಚಿಕಿತ್ಸೆಗಾಗಿ ಲಂಡನ್ ಗೆ ತೆರಳಲಿದ್ದಾರೆ ಎಂದು ಟಿವಿ5 ವರದಿ ಮಾಡಿತ್ತು. ಆದರೆ ವರದಿಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದ ಸಿಎಂ, ಅನಾರೋಗ್ಯದ ಕಾರಣಗಳಿಂದ ನಾನು ರಾಜೀನಾಮೆ ನೀಡಲಿದ್ದೇನೆ ಎಂದು ಕೆಲ ಟಿವಿ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿಯು ಸತ್ಯಕ್ಕೆ ದೂರವಾಗಿದ್ದು, ಪ್ರಸಾರವಾಗುತ್ತಿರುವ ಎಲ್ಲ ಅಂಶಗಳು ಆಧಾರ ರಹಿತವಾಗಿವೆ ಎಂದು ಟ್ವೀಟ್ ಮಾಡಿದ್ದಾರೆ.