ಬೆಂಗಳೂರು: ಕಳವು ನಡೆದು ಮೂರು ದಿನವಾದರೂ ನಟ ವಿನೋದ್ ರಾಜ್ ಅವರ ಗಮನವನ್ನು ಬೇರೆಡೆಗೆ ಸೆಳೆದು ಅವರ ಕಾರಿನಿಂದ 1 ಲಕ್ಷ ರೂಪಾಯಿ ಕದ್ದವರು ಯಾರು ಎಂದು ನೆಲಮಂಗಲ ಪೊಲೀಸರಿಗೆ ಸುಳಿವು ಸಿಕ್ಕಿಲ್ಲ. ಸಿಸಿಟಿವಿಯಲ್ಲಿ ದಾಖಲಾದ ತುಣುಕುಗಳನ್ನು ಪರಿಶೀಲಿಸಲಾಗಿದ್ದರೂ ಕೂಡ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಪೊಲೀಸರು ಹೇಳುತ್ತಾರೆ.
ಕಾರಿನಿಂದ ಹಣದ ಬ್ಯಾಗನ್ನು ಕಿತ್ತುಕೊಂಡು ಹೋದ ಸ್ಥಳದ ಪಕ್ಕದಲ್ಲಿದ್ದ ಸಿಸಿಟಿವಿ ಕ್ಯಾಮರಾ ಕಳೆದ ಕೆಲ ದಿನಗಳಿಂದ ಕೆಲಸ ಮಾಡುತ್ತಿರಲಿಲ್ಲ. ಹೀಗಾಗಿ ಪೊಲೀಸರಿಗೆ ಯಾವುದೇ ಪ್ರಮುಖ ಸಾಕ್ಷಿಗಳು ಸಿಕ್ಕಿಲ್ಲ ಎನ್ನುತ್ತಾರೆ ತನಿಖಾಧಿಕಾರಿಗಳು.
ಕಳೆದ ಶುಕ್ರವಾರ ಇಬ್ಬರು ವ್ಯಕ್ತಿಗಳು ನಟ ವಿನೋದ್ ರಾಜ್ ಅವರ ಕಾರು ಟಯರ್ ಪಂಕ್ಚರ್ ಆಗಿದೆ ಎಂದು ಗಮನವನ್ನು ಬೇರೆಡೆ ಸೆಳೆದು ಕಾರಿನೊಳಗಿದ್ದ ಹಣದ ಬ್ಯಾಗನ್ನು ಕದ್ದು ಪರಾರಿಯಾಗಿದ್ದರು. ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ ನಟ ವಿನೋದ್ ರಾಜ್, ಸ್ಥಳ ಪರಿಶೀಲನೆಗೆಂದು ಪೊಲೀಸರು ನನ್ನನ್ನು ಮರುದಿನ ಶನಿವಾರ ಕರೆದರು. ಆಗ ಅಲ್ಲಿ ಪೆಟ್ರೋಲ್ ಬಂಕ್ ಹತ್ತಿರ ನನ್ನ ಹಣ ಕಳವಾಗುವ ಹಿಂದಿನ ದಿನ ಮತ್ತೊಂದು ದರೋಡೆ ನಡೆದಿತ್ತು ಎಂದು ತಿಳಿದುಬಂದು. ಪೊಲೀಸರು ಸದ್ಯದಲ್ಲಿಯೇ ಆರೋಪಿಗಳನ್ನು ಹಿಡಿಯುತ್ತಾರೆ ಎಂಬ ನಂಬಿಕೆಯಿದೆ ಎನ್ನುತ್ತಾರೆ.
ಸಿಬ್ಬಂದಿಗೆ ಪ್ರತಿನಿತ್ಯ ವಿವಿಐಪಿ ಮತ್ತು ವಿಐಪಿಗಳ ಭದ್ರತೆ ತಪಾಸಣೆ ಕೆಲಸವಿರುವುದರಿಂದ ಕಚೇರಿಯಲ್ಲಿ ಹಲವು ಕೇಸುಗಳನ್ನು ತನಿಖೆ ಮಾಡಲು ಸಮಯವೇ ಇಲ್ಲ. ಇನ್ನೂ ಹಲವು ಕೇಸುಗಳ ತನಿಖೆಯಾಗಬೇಕಿದೆ. ಹಿರಿಯ ಅಧಿಕಾರಿಗಳು ಪ್ರಕರಣ ನಡೆದ ಸ್ಥಳಕ್ಕೆ ಭೇಟಿ ನೀಡುವುದಿಲ್ಲ, ಹೀಗಾಗಿ ತನಿಖೆಯಲ್ಲಿ ಆಸಕ್ತಿಯೇ ಹೊರಟುಹೋಗುತ್ತದೆ ಎಂದು ಪೊಲೀಸ್ ಠಾಣೆಯ ಮೂಲಗಳು ಹೇಳುತ್ತವೆ.
ಈ ಮಧ್ಯೆ ಕಳೆದ ತಿಂಗಳು 25ರಂದು ಪುರುಷರ ಗ್ಯಾಂಗೊಂದು ಬಬಿಕೆರೆ ಗ್ರಾಮದ ಹತ್ತಿರ ಪೆಟ್ರೋಲ್ ಬಂಕ್ ಮೇಲೆ ದಾಳಿ ನಡೆಸಿ ಒಂದೂವರೆ ಲಕ್ಷ ರೂಪಾಯಿ ದರೋಡೆ ಮಾಡಿದೆ. ಆ ಕೇಸಿನ ಸುಳಿವು ಕೂಡ ಪೊಲೀಸರಿಗೆ ಸಿಕ್ಕಿಲ್ಲ.