ರಾಜ್ಯ

ನಕಲಿ ಚಿನ್ನ ನಾಣ್ಯ ಕೊಟ್ಟು 1 ಲಕ್ಷ ರೂ.ಎಗರಿಸಿ ಐವರಿಗೆ ಪಂಗನಾಮ ಹಾಕಿದ ಭೂಪ!

Sumana Upadhyaya

ಶಿವಮೊಗ್ಗ: ಅಪಹರಣಕಾರರು ಎಂದು ಶಂಕಿಸಿ ಶಿವಮೊಗ್ಗ ಜಿಲ್ಲೆಯ ಕೊಲ್ಲಾಪುರ್ ಗ್ರಾಮದ ನಿವಾಸಿಗಳು ಬೆಂಗಳೂರು ಮೂಲದ ಐವರು ಪುರುಷರನ್ನು ಹಿಡಿದು ರೂಮೊಂದರಲ್ಲಿ ನಿನ್ನೆ ಕೂಡಿ ಹಾಕಿದ ಘಟನೆ ನಡೆದಿದೆ. ಗ್ರಾಮಕ್ಕೆ ಏಕೆ ಬಂದಿರಿ ಎಂದು ಗ್ರಾಮಸ್ಥರು ಪ್ರಶ್ನಿಸಿದಾಗ ಅಡಗಿಸಿಟ್ಟ ನಿಧಿಯನ್ನು ಹುಡುಕಲು ಬಂದಿರುವುದಾಗಿ ಹೇಳಿದರು.

ಐವರನ್ನು ಮೂರ್ತಿ, ಸತೀಶ್, ಅವಿನಾಶ್, ಅಶೋಕ್ ಮತ್ತು ಅಜಿತ್ ಎಂದು ಗುರುತಿಸಲಾಗಿದೆ. ಪೊಲೀಸ್ ಸೂಪರಿಂಟೆಂಡ್ ಅಭಿನವ್ ಖಾರೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿ, ಮಂಜುನಾಥ್ ಎಂಬುವವನು ಚಿನ್ನದ ನಾಣ್ಯಕ್ಕೆ ಬದಲಾಗಿ ಅವರಿಂದ ಹಣ ಪಡೆದುಕೊಂಡಿದ್ದ. ಆದರೆ ಅದಕ್ಕೆ ಅವನು ನಕಲಿ ಚಿನ್ನದ ನಾಣ್ಯ ನೀಡಿದ್ದನು ಎಂದಿದ್ದಾರೆ.

ನಡೆದ ಘಟನೆಯೇನು?: ಮಂಜುನಾಥ್ ಮತ್ತು ಐವರು ಮೋಸ ಹೋದ ಪುರುಷರು ಕಳೆದ ಒಂದು ವರ್ಷದಿಂದ ಸಂಪರ್ಕದಲ್ಲಿದ್ದರು. ಕಳೆದ ತಿಂಗಳು ಮಂಜುನಾಥ್ ಈ ಐವರಲ್ಲಿ ನನಗೊಂದು ನಿಧಿ ಸಿಕ್ಕಿದೆ, ಅದನ್ನು ರಹಸ್ಯವಾಗಿ ಮಾರಾಟ ಮಾಡಬೇಕೆಂದಿದ್ದೇನೆ ಎಂದರು. ಚಿನ್ನದ ನಾಣ್ಯ ನೋಡಲು ಶಿವಮೊಗ್ಗಕ್ಕೆ ಬನ್ನಿ ಎಂದು ಕರೆದಿದ್ದನು. ಅಶೋಕ್ ಎಂಬುವವನು ಬಂದಾಗ 9 ಗ್ರಾಮ್ ನ ಚಿನ್ನದ ನಾಣ್ಯ ತೋರಿಸಿದ್ದನು.

ಮಂಜುನಾಥ್ ನ ಮಾತನ್ನು ನಂಬಿ ಅಶೋಕ್ ಮತ್ತು ಇತರರು ಶಿವಮೊಗ್ಗಕ್ಕೆ ಬಂದು ಆರೋಪಿಯನ್ನು ಸಂಪರ್ಕಿಸಿದರು. ಕಲ್ಲಾಪುರಕ್ಕೆ ಬನ್ನಿ ಎಂದು ಮಂಜುನಾಥ್ ಐವರನ್ನೂ ಕರೆದನು. ಅವರು ಬಂದಾಗ ಅವರಿಂದ 1 ಲಕ್ಷ ರೂಪಾಯಿ ಪಡೆದು ಮುಚ್ಚಿದ ಬ್ಯಾಗನ್ನು ನೀಡಿದನು. ದೇವಸ್ಥಾನದ ಮುಂದೆ ತೆರೆಯಿರಿ ಎಂದು ಹೇಳಿ ಅಲ್ಲಿಂದ ಪರಾರಿಯಾದನು. ಬ್ಯಾಗನ್ನು ತೆರೆದು ನೋಡಿದರೆ ಅದರಲ್ಲಿ ಇದ್ದದ್ದು ನಕಲಿ ನಾಣ್ಯಗಳು.

ನಂತರ ಆರೋಪಿಯನ್ನು ಹುಡುಕಲು ಮೋಸ ಹೋದ ಐವರು ಗ್ರಾಮಕ್ಕೆ ಬಂದಿದ್ದರು. ಗ್ರಾಮಸ್ಥರು ಅವರನ್ನು ದೇವಸ್ಥಾನದ ಕೋಣೆಯೊಂದರಲ್ಲಿ ಕೂಡಿಹಾಕಿ ಪೊಲೀಸರಿಗೆ ತಿಳಿಸಿದರು. ಘಟನೆ ಸಂಬಂಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

SCROLL FOR NEXT