ರಾಜ್ಯ

ಬೆಂಗಳೂರಲ್ಲಿ ಬುಲೆಟ್ ಕಳ್ಳರು: ಎಲೆಕ್ಟ್ರಾನಿಕ್ ಸಿಟಿಯಲ್ಲಿ ಒಂದು ತಿಂಗಳಲ್ಲಿ 8 ರಾಯಲ್ ಎನ್'ಫೀಲ್ಡ್ ಕಳ್ಳತನ

Manjula VN
ಬೆಂಗಳೂರು: ಬೆಂಗಳೂರು ನಗರದಲ್ಲಿ ಬುಲೆಟ್ ಬೈಕ್ ಕಳ್ಳರ ಹಾವಳಿ ಹೆಚ್ಚಾಗಿದ್ದು, ಒಂದೇ ತಿಂಗಳಿನಲ್ಲಿ 8 ರಾಯಲ್ ಎನ್'ಫೀಲ್ಡ್ ಗಳು ಕಳ್ಳತನವಾಗಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದೆ. 
ಸದಾ ಶಿವಂ (25) ಎಂಬುವವರ ರಾಯಲ್ ಎನ್'ಫೀಲ್ಡ್ ಬೈಕ್ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮಧ್ಯಾಹ್ನ 3.20ರ ಸುಮಾರಿಗೆ  ಸೆಪ್ಟೆಂಬರ್ 25 ರಂದು ಕಳ್ಳತನವಾಗಿದೆ. 
ಬೈಕ್ ಕಳ್ಳತನವಾಗಿರುವ ಹಿನ್ನಲೆಯಲ್ಲಿ ಪೊಲೀಸ್ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದೆ. ಇದೇ ಸಮಯದಲ್ಲಿ ವ್ಯಕ್ತಿಯೊಬ್ಬರನ್ನು ಭೇಟಿ ಮಾಡಿದೆ. ಆ ವ್ಯಕ್ತಿಯ ಬೈಕ್ ಕೂಡ ಅದೇ ದಿನ 3.30ರ ಸುಮಾರಿಗೆ ಅದೇ ಪ್ರದೇಶದಲ್ಲಿಯೇ ಕಳ್ಳತನವಾಗಿದೆ. ಕಳ್ಳತನ ನಡೆದಿರುವ ಘಟನಾ ಸ್ಥಳದಲ್ಲಿ ಅತಿಥಿ ಗೃಹವೊಂದಿದ್ದು, ಅಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದುಕೊಂಡಿದ್ದೇವೆ. ಆದರೂ, ಪೊಲೀಸರಿಗೆ ಕಳ್ಳರನ್ನು ಹಿಡಿಯಲು ಸಾಧ್ಯವಾಗುತ್ತಿಲ್ಲ ಎಂದು ಸದಾ ಶಿವಂ ಅವರು ಹೇಳಿದ್ದಾರೆ. 
ಇದರಂತೆ 8 ಮಂದಿಯ ಬೈಕ್ ಗಳು ಕಳ್ಳತನವಾಗಿದ್ದು, ಇದರಲ್ಲಿ ಕೇವಲ ಎರಡು ಪ್ರಕರಣಗಳ ಕುರಿತಷ್ಟೇ ಎಫ್ಐಆರ್ ದಾಖಲಾಗಿದೆ. ಬೈಕ್ ಕಳೆದುಕೊಂಡವರು ಪ್ರತೀನಿತ್ಯ ಪೊಲೀಸ್ ಠಾಣೆಗೆ ಭೇಟಿ ನೀಡಿ ವಿಚಾರಿಸುತ್ತಲೇ ಇದ್ದಾರೆಂದು ತಿಳಿದುಬಂದಿದೆ. 
ನನ್ನ ಬೈಕ್ ಕಳ್ಳತನವಾಗಿ 3 ದಿನಗಳಾಗಿವೆ. ಆದರೂ ಎಫ್ಐಆರ್ ದಾಖಲಾಗಿಲ್ಲ. ಪೊಲೀಸರು ತಡವಾಗಿ ಪ್ರಕ್ರಿಯೆ ನಡೆಸುತ್ತಿದ್ದಾರೆ. ಅಲ್ಲದೆ, ಮುಂದಿನ ದಿನ ಬರುವಂತೆ ತಿಳಿಸುತ್ತಲೇ ಇದ್ದಾರೆಂದು ಬೈಕ್ ಕಳೆದುಕೊಂಡ ವ್ಯಕ್ತಿಯೊಬ್ಬರು ಹೇಳಿದ್ದಾರೆ. 
ಪ್ರಕರಣ ಸಂಬಂಧ ಹೇಳಿಕೆ ನೀಡಿರುವ ಎಸ್ಐ ಆನಂದ್ ಗೌಡ ಅವರು, ತನಿಖೆ ಪ್ರಗತಿಯಲ್ಲಿದೆ. ಎಲ್ಲಾ ಬೈಕ್ ಗಳನ್ನು ಕಳ್ಳತನ ಮಾಡಿರವವರು ಒಬ್ಬರೇ ಎಂಬುದು ಸ್ಪಷ್ಟವಾಗಿಲ್ಲ. ಸಿಸಿಟಿವಿ ದೃಶ್ಯಾವಳಿಗಳನ್ನು ಅಪರಾಧ ವಿಭಾಗಕ್ಕೆ ಕಳುಹಿಸಿಕೊಡಲಾಗಿದೆ ಎಂದು ಹೇಳಿದ್ದಾರೆ. 
ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಮಾತನಾಡಿ, ಕಳ್ಳತನ ಮಾಡಲು ಅತ್ಯಂತ ಸುಲಭವಾದ ಬೈಕ್ ಎಂದರೆ, ರಾಯಲ್ ಎನ್'ಫೀಲ್ಡ್. ಈ ಬೈಕ್ ಮರು ಮಾರಾಟಕ್ಕೂ ಬಹಳ ಬೆಲೆ ಇದೆ. ಕಳ್ಳರು ಯಾರಾದರೂ ಆಗಬಹುದು. ಆದರೆ, ಪ್ರತ್ಯೇಕ ಗ್ಯಾಂಗ್ ಗಳಿಲ್ಲ ಎಂದು ತಿಳಿಸಿದ್ದಾರೆ. 
SCROLL FOR NEXT