ರಾಜ್ಯ

ಬಿಡಿಎ, ಕೆಐಎಡಿಬಿ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ, 4 ಕೆಜಿ ಚಿನ್ನ, 10 ಕೋಟಿ ನಗದು ಪತ್ತೆ

Manjula VN
ಬೆಂಗಳೂರು:ಆಕ್ರಮ ಆಸ್ತಿ ಗಳಿಸಿದ ಆರೋಪದ ಮೇಲೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಅಧಿಕಾರಿಗಳು ಶುಕ್ರವಾರ ಕರ್ನಾಟಕ ಕೈಗಾರಿಕಾ ಪ್ರಾದೇಶಾಭಿವೃದ್ಧಿ ಮಂಡಳಿಯ(ಕೆಐಎಡಿಬಿ) ಮುಖ್ಯ ಅಭಿವೃದ್ಧಿ ಟಿ.ಆರ್. ಸ್ವಾಮಿ ಮತ್ತು ಬಿಡಿಎ ಎಂಜಿನಿಯರ್ ಗೌಡಯ್ಯ ಅವರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. 
ಟಿ.ಆರ್. ಸ್ವಾಮಿ ಮತ್ತುಗೌಡಯ್ಯ ಅವರು ಆದಾಯಕ್ಕೂ ಮೀರಿ ಅಪಾರ ಪ್ರಮಾಣದ ಆಸ್ತಿ ಗಳಿಸಿದ ಬಗ್ಗೆ ದೂರು ಹಾಗೂ ಮಾಹಿತಿಯನ್ನು ಆಧರಿಸಿ ಎಸಿಬಿ ಅಧಿಕಾರಿಗಳ ತಂಡ ಇಂದು ಇಬ್ಬರ ಕಚೇರಿ ಮನೆ ಸೇರಿದಂತೆ 8 ಕಡೆ ದಾಳಿ ನಡಸಿದ್ದು, 4 ಕೆ.ಜಿ. ಚಿನ್ನ ಹಾಗೂ ಸುಮಾರು 10 ಕೋಟಿ ರುಪಾಯಿ ನಗದು ಪತ್ತೆ ಮಾಡಿದ್ದಾರೆ.  ಎಬಿಸಿ ಅಧಿಕಾರಿಗಳು ಕೌಂಟಿಂಗ್ ಮೆಷಿನ್ ನಲ್ಲಿ ಹಣ ಲೆಕ್ಕ ಹಾಕುತ್ತಿದ್ದಾರೆ.
ಬೆಂಗಳೂರಿನ ಬಸವೇಶ್ವರನಗರದಲ್ಲಿರುವ ಗೌಡಯ್ಯ ನಿವಾಸದ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಸುಮಾರು 4 ಕೆ.ಜಿ.ಚಿನ್ನ ಹಾಗೂ 70 ಲಕ್ಷ ರುಪಾಯಿ ನಗದು ಜಪ್ತಿ ಮಾಡಿದ್ದಾರೆ. ಅಲ್ಲದೆ ತುಮಕೂರಿನಲ್ಲಿರುವ ಗೌಡಯ್ಯ ಅವರ ಸಹೋದರನ ಮನೆ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದು, ತೀವ್ರ ಶೋಧ ನಡೆಸುತ್ತಿದ್ದಾರೆ.
ಇನ್ನು ಟಿ.ಆರ್ ಸ್ವಾಮಿ ಅವರಿಗೆ ಸೇರಿರುವ ಮಲ್ಲೇಶ್ವರದ ಮಂತ್ರಿ ಗ್ರೀನ್ಸ್ ಅಪಾರ್ಟ್'ಮೆಂಟ್ ನಲ್ಲಿರುವ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ಮೂರು ಐಷಾರಾಮಿ ವಾಹನಗಳು, ಅಪಾರ ಪ್ರಮಾಣದ ನಗದು, ಜಿನ್ನಾಭರಣ ಹಾಗೂ ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. 
ಎಸಿಬಿ ಅಧಿಕಾರಿಗಳು ಮನೆಗೆ ಆಗಮಿಸಿದ ವೇಳೆ ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದ ಸ್ವಾಮಿ, ಎಷ್ಟು ಬಾರಿ ಬಾಗಿಲು ಬಡಿದರು ತೆರೆಯಲಿಲ್ಲ. ಸ್ವಾಮಿ ಮನೆಯಲ್ಲಿದ್ದ ಹಣವನ್ನು ಬ್ಯಾಗ್ ನಲ್ಲಿ ತುಂಬಿ ಹೊರಗಡೆ ಬೆರೆಯವರನ್ನು ಕರೆಯಿಸಿಕೊಂಡು ಕಿಟಕಿಯಿಂದ ಬ್ಯಾಗ್ ಅನ್ನು ಹೊರಗೆಸೆದಿದ್ದಾರೆ. ಎಸಿಬಿ ಅಧಿಕಾರಿಗಳು ಆ ಬ್ಯಾಗ್ ಅನ್ನು ಸಹ ವಶಕ್ಕೆ ಪಡೆದಿದ್ದು, ಅಧಿಕಾರಿಯ ವಿಚಾರಣೆ ನಡೆಸುತ್ತಿದ್ದಾರೆ.
SCROLL FOR NEXT