ಮೈಸೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ಯಶಸ್ವಿಯಾಗಿದ್ದು, ಹಲವು ದಿನಗಳಿಂದ ಅನಿರ್ದಿಷ್ಠಾವಧಿ ಮುಷ್ಕರ ನಡೆಸುತ್ತಿದ್ದ ಪೌರ ಕಾರ್ಮಿಕರು ಮಂಗಳವಾರ ಧರಣಿಯನ್ನು ಕೈಬಿಟ್ಟಿದ್ದಾರೆ.
ಪ್ರತಿಭಟನಾ ನಿರತ ಪೌರ ಕಾರ್ಮಿಕರ ಮುಖಂಡರೊಂದಿಗೆ ನಿನ್ನೆಯಷ್ಟೇ ಕುಮಾರಸ್ವಾಮಿಯವನರು ಬೆಂಗಳೂರಿನಲ್ಲಿ ಸಭೆ ನಡೆಸಿ, ಮಾತುಕತೆ ನಡೆಸಿದರು. ಈ ವೇಳೆ ಪೌರ ಕಾರ್ಮಿಕರ ಬೇಡಿಕೆಗಳ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸುವುದಾಗಿ ಭರವಸೆ ನೀಡಿದ್ದರು. ಅಲ್ಲದೆ, ಈ ಬಗ್ಗೆ ಸೂಕ್ತ ಪ್ರಸ್ತಾವವನ್ನು ಸಚಿವ ಸಂಪುಟದ ಮುಂದೆ ತರಲು ಅಧಿಕಾರಿಗಳಿಗೂ ಸೂಚಿಸಿದ್ದರು.
ಸಭೆ ಬಳಿಕ ಪ್ರತಿಕ್ರಿಯೆ ನೀಡಿದ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆ, ಪೌರಕಾರ್ಮಿಕರ ಮಹಾಸಂಘದ ರಾಜ್ಯಾಧ್ಯಕ್ಷ ನಾರಾಯಣ ಅವರು, ಬುಧವಾರದಿಂದ ದಸರಾ ಆರಂಭಗೊಳ್ಳಲಿದ್ದು, ಮಂಗಳವಾರ ರಾತ್ರಿಯಿಂದಲೇ ಪೌರ ಕಾರ್ಮಿಕರು ಸ್ವಚ್ಛತಾ ಕಾರ್ಯಗಳನ್ನು ಆರಂಭಿಸಲಿದ್ದಾರೆ. ಮುಂದಿನ ಕೆಲ ದಿನಗಳ ಕಾಲ ಹೆಚ್ಚು ಗಂಟೆಗಳ ಕಾಲ ಕಾರ್ಮಿಕರು ಕೆಲಸ ಮಾಡಲಿದ್ದಾರೆ. ಧರಣಿ ಬಿಟ್ಟರೆ ನಮಗಾವುದೇ ಆಯ್ಕೆಗಳಿರಲಿಲ್ಲ. ನಮ್ಮಿಂದಾದ ಸಮಸ್ಯೆಗಳಿಗೆ ವಿಷಾದ ವ್ಯಕ್ತಪಡಿಸುತ್ತೇವೆ. ಮುಂದಿನ 48 ಗಂಟೆಗಳಲ್ಲಿ ನಗರ ಸ್ವಚ್ಛಗೊಳ್ಳಲಿದೆ ಎಂದು ಹೇಳಿದ್ದಾರೆ.