ಮೈಸೂರು: ದಸರಾ ಉತ್ಸವದ ವೇಳೆ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಹೆಚ್ಚಾಗುತ್ತಿದೆ. ಉತ್ಸವದ ವೇಳೆ ಸ್ಥಳದಲ್ಲಿದ್ದ ಮಹಿಳೆಯರೊಂದಿಗೆ ಕಿಡಿಗೇಡಿಗಳು ಅಸಭ್ಯವಾಗಿ ವರ್ತಿಸುತ್ತಿದ್ದು, ರಕ್ಷಣಾಗಾಗಿ ಸರ್ಕಾರ ಭದ್ರತೆಯನ್ನೇನೋ ಹೆಚ್ಚಿಸಿರುವುದಾಗಿ ಹೇಳುತ್ತಿದೆ. ಆದರೆ, ಲಕ್ಷಾಂತರ ಜನರ ರಕ್ಷಣೆಗೆ ಕೇವಲ 250 ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿದ್ದಾರೆಂಬ ಮಾಹಿತಿ ಇದೀಗ ಬೆಳಕಿಗೆ ಬಂದಿದೆ.
ಮೈಸೂರು ಪೊಲೀಸ್ ಆಯುಕ್ತ ಎ.ಸುಬ್ರಹ್ಮಣ್ಯೇಶ್ವರ ರಾವ್ ಅವರು ಮಾತನಾಡಿ, ಪ್ರಕರಣ ಸಂಬಂಧ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೃಷ್ಣರಾಜ ಮಾರ್ಗದಲ್ಲಿ 250 ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. 10 ಮೀಟರ್'ಗೆ ಓರ್ವ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಕಾರ್ಯಕ್ರಮದ ವೇದಿಕೆ ಬಳಿ ಮೊಬೈಲ್ ಕಮಾಂಡ್ ಕೇಂದ್ರವನ್ನೂ ಕೂಡ ಸ್ಥಾಪಿಸಲಾಗಿದೆ ಎಂದು ಹೇಳಿದ್ದಾರೆ.
ನಿರೀಕ್ಷೆಗಿಂತಲೂ ಕಡಿಮೆ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡುವುದರಿಂದ ಇಂತಹ ಅಹಿತಕರ ಘಟನೆಗಳು ನಿಯಂತ್ರಣಕ್ಕೆ ಬರಲಿದೆ ಎಂದು ಕಾರ್ಯಕ್ರಮ ಆಯೋಜಕರು ಹೇಳಿದ್ದಾರೆ.
ಮುಂದಿನ ವರ್ಷದ ಕಾರ್ಯಕ್ರಮಕ್ಕೆ ಈ ಬಾರಿಯ ಕಾರ್ಯಕ್ರಮ ಪೊಲೀಸರಿಗೆ ಅನುಭವವಾಗಲಿದೆ. ಮುಂದಿನ ವರ್ಷ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ. ಬ್ಯಾರಿಕೇಡ್ ಗಳನ್ನು ಹಾಕಿ ಪ್ರವೇಶ ಹಾಗೂ ನಿರ್ಗಮನಕ್ಕೆ ಸೂಕ್ತ ದಾರಿಗಳನ್ನು ಮಾಡಿಕೊಡಲಾಗುತ್ತದೆ ಎಂದು ಮೈಸೂರು ಪೊಲೀಸ್ ಆಯುಕ್ತರು ಹೇಳಿದ್ದಾರೆ.
ಜಂಬೂ ಸವಾರಿ ವೇಳೆ ಪ್ರತೀ 30 ಮೀಟರ್ ಗಳಿಗೆ ಓರ್ವ ಪೊಲೀಸ್ ಸಿಬ್ಬಂದಿನ್ನು ನಿಯೋಜಿಸುತ್ತೇವೆ. ಸ್ಥಳದಲ್ಲಿ ದುರ್ವರ್ತನೆ ತೋರುವ ಜನರನ್ನು ಸ್ಥಳದಿಂದ ಕಳುಹಿಸಲಾಗುತ್ತದೆ. ರಸ್ತೆಯಲ್ಲಿ ಮಹಿಳೆಗೆ ವ್ಯಕ್ತಿಯೊಬ್ಬ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಹಿಳೆ ದೂರು ದಾಖಲಿಸಿದ್ದಾರೆ. ಆರೋಪಿಗಳು ಬಳಸಿದ್ದ ವಾಹನದ ಸಂಖ್ಯೆಯನ್ನು ಗುರ್ತಿಸಿ ಆರೋಪಿಗಳನ್ನು ಶೀಘ್ರದಲ್ಲಿಯೇ ಬಂಧನಕ್ಕೊಳಪಡಿಸಲಾಗುತ್ತದೆ. ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಸಂತ್ರಸ್ತ ಮಹಿಳೆಯರು ಮುಂದಕ್ಕೆ ಬಂದು ಪೊಲೀಸರಿಗೆ ಸಹಾಯ ಮಾಡಬೇಕಿದೆ. ದೂರು ದಾಖಲಿಸುವಂತೆ ಯಾರಿಗೂ ನಾವು ಒತ್ತಡ ಹೇರುತ್ತಿಲ್ಲ. ಮಹಿಳೆಯರು ಮುಂದೆ ಬಂದು ದೂರು ನೀಡಿದರೆ, ಆರೋಪಿಗಳನ್ನು ಬಂಧಿಸಲು ಸಹಾಯವಾಗುತ್ತದೆ. ಸಂತ್ರಸ್ತ ಮಹಿಳೆಯರ ಗುರ್ತಿಕೆಯನ್ನು ಗೌಪ್ಯವಾಗಿಡುತ್ತೇವೆಂಬ ಭರವಸೆಯನ್ನು ನೀಡುತ್ತೇವೆಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics