ರಾಜ್ಯ

ನಾಡಿನೆಲ್ಲೆಡೆ ವಿಜಯದಶಮಿ ಸಂಭ್ರಮ, ಮೈಸೂರಿನಲ್ಲಿ ಐತಿಹಾಸಿಕ ಜಂಬೂ ಸವಾರಿ ಕ್ಷಣಗಣನೆ ಆರಂಭ

Srinivasamurthy VN
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆ ಮತ್ತು ಪ್ರವಾಸಿಗರ ಕೇಂದ್ರ ಬಿಂದು ಐತಿಹಾಸಿಕ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಅದ್ಧೂರಿ ದಸರಾ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದೆ.
ವಿಜಯದಶಮಿಯಂದು ನಡೆಯುವ ಜಂಬೂಸವಾರಿ ಮೆರವಣಿಗೆ ನೋಡಲು ದೇಶ-ವಿದೇಶದಿಂದ ಪ್ರವಾಸಿಗರು ಬಂದು ತುದಿಗಾಲಲ್ಲಿ ನಿಂತಿದ್ದಾರೆ. ಮಧ್ಯಾಹ್ನ 2.30 ರಿಂದ 3.16 ರೊಳಗೆ ಅರಮನೆ ಉತ್ತರ ದ್ವಾರ ಬಲರಾಮ ದ್ವಾರದಲ್ಲಿ ನಂದಿ ಪೂಜೆ ಮಾಡಿ ಬಳಿಕ ಮಧ್ಯಾಹ್ನ 3.40 ರಿಂದ 4.10 ರೊಳಗೆ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿ ಮೆರವಣಿಗೆಗೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ.
ಜಂಬೂ ಸವಾರಿಯಲ್ಲಿ ಸತತ 5ನೇ ಬಾರಿಗೆ ಅರ್ಜುನ 750 ಕೆಜಿ ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪಿಸಿರುವ ನಾಡದೇವತೆ ಚಾಮುಂಡೇಶ್ವರಿಯನ್ನು ಹೊತ್ತು ರಾಜ ಗಾಂಭೀರ್ಯದಲ್ಲಿ ಸಾಗಲಿದ್ದಾನೆ. ಅರ್ಜುನನಿಗೆ ಕಾವೇರಿ ಮತ್ತು ವರಲಕ್ಷ್ಮಿ ಆನೆಗಳು ಸಾಥ್ ನೀಡಲಿವೆ. ನಿಶಾನೆ ಮತ್ತು ನೌಪತ್ ಆನೆಗಳಾಗಿ ಅಭಿಮನ್ಯು, ಬಲರಾಮ, ಕ್ರಮ, ದ್ರೋಣ, ಕಾವೇರಿ, ವಿಜಯ, ಚೈತ್ರ, ಗೋಪಿ ಪ್ರಶಾಂತ, ನಂಜಯ ಆಣೆಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಲಿವೆ.
ಈಗಾಗಲೇ ಅರಮನೆ ಆವರಣದಲ್ಲಿ ಆನೆಗಳಿಗಾಗಿ ನಿರ್ಮಿಸಲಾಗಿರುವ ವಿಶೇಷ ಬಿಡಾರಗಳಲ್ಲಿ ಅರ್ಜುನ ಸೇರಿದಂತೆ ಎಲ್ಲ ಆನೆಗಳಿಗೂ ವಿಶೇಷ ಅಲಂಕಾರ ಮಾಡಲಾಗುತ್ತಿದೆ. ಎಲ್ಲ ಆನೆಗಳಿಗೂ ವಿಶೇಷ ಆಹಾರಗಳನ್ನು ನೀಡಲಾಗುತ್ತಿದ್ದು, ಮಾವುತರೂ ಕೂಡ ವಿಶೇಷ ಧಿರಿಸುಗಳನ್ನು ಧರಿಸಿ ಕಂಗೊಳಿಸಲಿದ್ದಾರೆ.
ಕೆ.ಆರ್‌.ವೃತ್ತದ ಮೂಲಕ ಸಯ್ಯಾಜಿರಾವ್‌ ರಸ್ತೆಯಲ್ಲಿ ಸಾಗಿ 5 ಕಿ.ಮೀ ದೂರವಿರುವ ಬನ್ನಿಮಂಟಪ ತಲುಪಲಿದೆ. ಧನಂಜಯ ಆನೆ ಇದೇ ಮೊದಲ ಬಾರಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಲಿದೆ. 12 ಆನೆಗಳ ಜೊತೆಗೆ ಅಶ್ವದಳ, ಪೊಲೀಸ್ ವಾದ್ಯವೃಂದ, ಕಲಾ ತಂಡಗಳು, 43 ಸ್ತಬ್ಧಚಿತ್ರಗಳು ಸಾಗಲಿವೆ. 30 ಜಿಲ್ಲೆಗಳಿಂದ ವೈವಿಧ್ಯಮಯ ಪರಿಕಲ್ಪನೆಗಳಲ್ಲಿ ಸ್ತಬ್ಧಚಿತ್ರ ಮೂಡಿಬಂದಿವೆ.
ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಮೈಸೂರಿಗೆ ಬರುತ್ತಿದ್ದು, ನಗರದಲ್ಲಿನ ಬಹುತೇಕ ಹೋಟೆಲ್‌ ಕೊಠಡಿಗಳು ಭರ್ತಿಯಾಗಿವೆ. ರಾಜಪಥದ ಪ್ರಮುಖ ಸ್ಥಳಗಳಲ್ಲಿ ಎಲ್‌ಇಡಿ ಪರದೆ ಅಳವಡಿಸಿ ಮೆರವಣಿಗೆ ನೇರ ಪ್ರಸಾರ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಬಿಗಿ ಬಂದೋಬಸ್ತ್‌ ಮಾಡಿದ್ದು, ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ‘ಮೊಬೈಲ್‌ ಕಮಾಂಡ್‌ ಸೆಂಟರ್‌’ ವಾಹನವು ಕಣ್ಣಿಡಲಿದೆ.
SCROLL FOR NEXT