ಡಿ,ಕೆ ಶಿವಕುಮಾರ್ ಮತ್ತು ಮಾತೆ ಮಹಾದೇವಿ
ಬಾಗಲಕೋಟೆ: ಕಾಂಗ್ರೆಸ್ ಸೋಲಿಗೆ ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರ ಕಾರಣ, ಧರ್ಮದಲ್ಲಿ ರಾಜಕೀಯಮಾಡಬಾರದು ನಮ್ಮಿಂದ ತಪ್ಪಾಗಿದೆ ಕ್ಷಮಿಸಿ ಎಂಬ ಸಚಿವ ಡಿ.ಕೆ ಶಿವಕುಮಾರ್ ಹೇಳಿಕೆಗೆ ಕೂಡಲು ಸಂಗಮ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಮಾತನಾಡಿದ ಮಾತೇ ಮಹಾದೇವಿ, ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಲಿಂಗಾಯತ ಧರ್ಮ ಕಾರಣವಲ್ಲ, ಕಾಂಗ್ರೆಸ್ ಪಕ್ಷದ ಹಿನ್ನಡೆಗೆ ಬೇರೆ ಕಾರಣಗಳಿವೆ. ಆದರೆ ಅದಕ್ಕೆ ಲಿಂಗಾಯತ ಧರ್ಮದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ. ಲಿಂಗಾಯತ ಧರ್ಮ ಪ್ರತ್ಯೇಕ ಮಾನ್ಯತೆ ವಿಚಾರಕ್ಕಾಗಿಯೇ ಈ ಬಾರಿ ಕಾಂಗ್ರೆಸ್‍ಗೆ ಹೆಚ್ಚು ಮತಗಳು ಬಿದ್ದಿವೆ. ಬೀದರ್‍ನಲ್ಲಿ ಐದು ಶಾಸಕರಲ್ಲಿ ನಾಲ್ವರು ಕಾಂಗ್ರೆಸ್‍ನಿಂದಲೇ ಆಯ್ಕೆಯಾಗಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಲಿಂಗಾಯತ ಧರ್ಮವನ್ನು ಒಡೆದಿದ್ದಾರೆ. ಸಮಾಜವನ್ನು ಒಡೆದಿದ್ದಾರೆ ಅನ್ನೋದು ತಪ್ಪು. 12 ನೇ ಶತಮಾನದಲ್ಲಿ ಬಸವಣ್ಣನವರು ಸಂಪ್ರದಾಯಬದ್ಧವಾದ ಕಂದಾಚಾರಗಳನ್ನು ಬಿಟ್ಟು ಅವರು ಲಿಂಗಾಯತ ಧರ್ಮವನ್ನು ಕಟ್ಟಿದ್ದಾರೆ. ಇದಕ್ಕೆ ಸಿದ್ದರಾಮಯ್ಯನವರು ಮಾನ್ಯತೆ ಕೊಟ್ಟಿದ್ದಾರೆ. ಅದಕ್ಕೆ ನಾವು ಅಭಿನಂದಿಸಬೇಕು. ಡಿಕೆ ಶಿವಕುಮಾರ್ ಅವರು ಬಹಳ ವಿಚಿತ್ರವಾದ ಮಾತುಗಳನ್ನಾಡಿದ್ದಾರೆ. ಅವರು ತಮ್ಮ ಹೇಳಿಕೆಗೆ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದಾರೆ.