ರಾಜ್ಯ

ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ: ಶೀಘ್ರದಲ್ಲಿಯೇ ಕಾನೂನು ಜಾರಿಗೆ ಚಿಂತನೆ

Manjula VN
ಬೆಂಗಳೂರು: ರಾಜ್ಯದಲ್ಲಿನ ವಾಣಿಜ್ಯ ಸಂಸ್ಥೆಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಕಾನೂನೊಂದನ್ನು ಶೀಘ್ರದಲ್ಲಿಯೇ ಜಾರಿಗೆ ತರಲು ಚಿಂತನೆಗಳು ನಡೆಯುತ್ತಿವೆ. 
ಬೆಳಗಾವಿಯಲ್ಲಿ ಮುಂದಿನ ದಿನಗಳಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮುಖ್ಯಸ್ಥ ಎಸ್.ಜಿ.ಸಿದ್ದರಾಮಯ್ಯ ಅವರು, ಕಾರ್ಮಿಕ ಇಲಾಖೆ, ಸಂಸದೀಯ ವ್ಯವಹಾರಗಳ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಬಗ್ಗೆ ಸಾಕಷ್ಟು ಸಭೆಯನ್ನು ನಡೆಸುತ್ತಿವೆ. ಅ.26ರಂದು ಅಂತಿಮ ಸುತ್ತಿನ ಸಭೆ ನಡೆಯಲಿದ್ದು, ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ಜಯಮಾಲಾ ಅವರ ಸಮ್ಮುಖದಲ್ಲಿ ಸಭೆ ನಡೆಯಲಿದೆ ಎಂದು ಹೇಳಿದ್ದಾರೆ. 
2017ರಲ್ಲಿ ಸುತ್ತೋಲೆ ಹೊರಡಿಸಿದ್ದ ಬಿಬಿಎಂಪಿ ನಾಮಫಲಕದಲ್ಲಿ ಶೇ.60 ರಷ್ಟು ಜಾಗವನ್ನು ಕನ್ನಡಕ್ಕೆ ಮೀಸಲಿಟ್ಟಿರಬೇಕೆಂದು ತಿಳಿಸಿತ್ತು. ಕನ್ನಡಕ್ಕೆ ಆದ್ಯತೆ ನೀಡದಿದ್ದ ಅಂಗಡಿಗಳ ಪರವಾನಗಿಯನ್ನು ರದ್ದು ಮಾಡುವುದಾಗಿ ತಿಳಿಸಿತ್ತು. ಈ ಸುತ್ತೋಲೆಯನ್ನು ಪ್ರಶ್ನಿಸಿ ಕೆಲ ಅಂಗಡಿ ಮಾಲೀಕರು ಹೈಕೋರ್ಟ್ ಮೆಟ್ಟಿಲೇರಿದ್ದರು. ಬಿಬಿಎಂಪಿ ಸುತ್ತೋಲೆ ಕುರಿತಂತೆ ಸಾಕಷ್ಟು ಪ್ರಶ್ನೆಗಳು ಎದ್ದಿದ್ದವು. ಆದೇಶ ಪಾಲಿಸಲು ಯಾವುದೇ ರೀತಿಯ ಕಾನೂನುಗಳಿಲ್ಲ ಎಂದು ನ್ಯಾಯಾಲಯ ಹೇಳಿತ್ತು ಅಲ್ಲದೆ, ಆದೇಶ ಅಸಾಂವಿಧಾನಿಕ ಎಂದಿತ್ತು. 
ಆದೇಶ ಕಾನೂನಾತ್ಮಕವಾಗಿ ನಿಲ್ಲಲು ಸಾಧ್ಯವಾಗಲಿಲ್ಲ. ಹೀಗಾಗಿ ಈ ಬಾರಿ ಕಾನೂನು ರಚಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಕಂಪನಿಯ ಹೆಸರಿಗೆ ಕನ್ನಡಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ನಾಮಫಲಕಕ್ಕೆ ಸೂಕ್ತ ಮಾರ್ಗದರ್ಶನಗಳನ್ನು ನೀಡಲಾಗುತ್ತದೆ. ಆದೇಶ ಪಾಲನೆ ಮಾಡದಿರುವವರ ಪರವಾನಗಿಯನ್ನು ರದ್ದು ಮಾಡಲಾಗುತ್ತದೆ. ಹೊರ ರಾಜ್ಯ ಹಾಗೂ ದೇಶಗಳಿಂದ ಬಂದಂತಹ ಕಂಪನಿಗಳಿಗೆ ನಮ್ಮ ಭೂಮಿ, ರಸ್ತೆ, ವಿದ್ಯುತ್, ನೀರು ಬೇಕು. ಆದರೆ, ನಮ್ಮ ಭಾಷೆಗೆ ಅವರಲ್ಲಿ ಜಾಗವಿರುವುದಿಲ್ಲ ಎಂದು ಸಿದ್ದರಾಮಯ್ಯ ಅವರು ಬೇಸರ ವ್ಯಕ್ತಪಡಿಸಿದ್ದಾರೆ. 
SCROLL FOR NEXT