ಬೆಂಗಳೂರು: ಸಾಫ್ಟ್ ವೇರ್ ಉದ್ಯೋಗಿ ಟೆಕ್ಕಿ ಕುಮಾರ್ ಅಜಿತಾಬ್ ನಾಪತ್ತೆ ಪ್ರಕರಣವನ್ನು ಸಿಬಿಐ ಗೆ ವಹಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ.
ಸೋಮವಾರ ಪ್ರಕರಣದ ತೀರ್ಪು ಪ್ರಕಟಿಸಿದ ನ್ಯಾಯಾಲಯ ಟೆಕ್ಕಿ ನಾಪತ್ತೆ ಕುರಿತ ತನಿಖೆಯನ್ನು ಸಿಬಿಐ ನಿರ್ವಹಿಸಲಿ ಎಂದು ಹೇಳಿದೆ.
ಹೈಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್ ಈ ತೀರ್ಪು ನೀಡಿದ್ದಾರೆ. ಸದ್ಯ ಪ್ರಕರಣ ತನಿಖೆಯನ್ನು ಸಿಐಡಿ ನಡೆಸುತ್ತಿದ್ದು ಇದನ್ನು ಸಿಬಿಐ ಗೆ ವಹಿಸಿ ಎಂದು ಅವರು ಆದೇಶಿಸಿದ್ದಾರೆ.
ನಾಪತ್ತೆಯಾಗಿರುವ ಟೆಕ್ಕಿ ಅಜಿತಾಬ್ ತಂದೆ ಅಶೋಕ್ ಕುಮಾರ್ ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ಆಗಸ್ಟ್ ನಲ್ಲಿ ಪೂರ್ಣಗೊಳಿಸಿದ್ದ ನ್ಯಾಯಾಲಯ ತೀರ್ಪು ಕಾಯ್ದಿರಿಸಿತ್ತು.
2017ರ ಡಿಸೆಂಬರ್‌ನಿಂದ ಟೆಕ್ಕಿ ಕುಮಾರ್ ಅಜಿತಾಬ್ ನಾಪತ್ತೆಯಾಗಿದ್ದು ಸುಮಾರು ಒಂಬತ್ತು ತಿಂಗಳು ಕಳೆದರೂ ಸಹ ಯಾವ ಸುಳಿವು ಲಭ್ಯವಾಗಿಲ್ಲ. ಓಎಲ್ ಎಕ್ಸ್ ನಲ್ಲಿ ತಮ್ಮ ಕಾರನ್ನು ಮಾರಾಟಕ್ಕಿಟ್ಟಿದ್ದ ಅಜಿತಾಬ್ ಗ್ರಾಹಕರಿಂದ ಕರೆ ಬಂದಾಗ ಕಾರು ತೋರಿಸಲೆಂದು ಹೊರಟಿದ್ದವರು ಹಿಂತಿರುಗಲಿಲ್ಲ. 2017ರ ಡಿಸೆಂಬರ್ 18ಕ್ಕೆ ಮನೆಯಿಂದ ಹೊರಟಿದ್ದ ಅಜಿತಾಬ್ ಇನ್ನೂ ಪತ್ತೆಯಾಗಿಲ್ಲ. ಪ್ರಕರಣ ತನಿಖೆ ನಡೆಸಿದ್ದ ಸಿಐಡಿ ಅಧಿಕಾರಿಗಳು ಅಮೆರಿಕಾದಲ್ಲಿನ ಗೂಗಲ್ ಗೆ ಅಜಿತಾಬ್ ಪತ್ತೆಗೆ ಸಹಕಾರ ನೀಡಲು ಕೋರಿದ್ದರು.