ರಾಜ್ಯ

ಮಲ್ಯಗೆ ಸೇರಿದ ಯುಆರ್ ಬಿಬಿಎಲ್ ಷೇರುಗಳನ್ನು ಖರೀದಿಸದಂತೆ ಸಾರ್ವಜನಿಕರಿಗೆ ಐಟಿ ಇಲಾಖೆ ಎಚ್ಚರಿಕೆ

Raghavendra Adiga
ಬೆಂಗಳೂರು: ಬ್ಯಾಂಕ್ ವಂಚನೆ ನಡೆಸಿ ದೇಶಭ್ರಷ್ಠನಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಘೋಷಿತ ಅಪರಾಧಿಯಾಗಿದ್ದು ಇವರ ಯುನೈಟೆಡ್ ರೇಸಿಂಗ್ ಮತ್ತು ಬ್ಲಡ್ ಸ್ಟಾಕ್ ಬ್ರೀಡರ್ಸ್ ಲಿಮಿಟೆಡ್ (ಯುಆರ್ಬಿಬಿಎಲ್) ಸಂಸ್ಥೆಗಳಿಗೆ ಸೇರಿದ  ಷೇರುಗಳ ಇ-ಹರಾಜು ಪ್ರಕ್ರಿಯೆ ಬಗ್ಗೆ ಸಾರ್ವಜನಿಕರು ಎಚ್ಚರವಾಗಿರಬೇಕು ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. ಡೆಬಿಟ್ ರಿಕವರಿ ಟ್ರಿಬ್ಯೂನಲ್ -2 ಅಡಿಯಲ್ಲಿ ಅಪರಾಧಿಯಾಗಿರುವ ಮಲ್ಯ ಒಡೆತನದ ಸಂಸ್ಥೆಯ ಷೇರು ಖರೀದಿಸದಿರುವಂತೆ ಆದಾಯ ತೆರಿಗೆ ಇಲಾಖೆ ಜನರಿಗೆ ಎಚ್ಚರಿಕೆ ರವಾನಿಸಿದೆ.
ಈ ಹಿಂದೆ ಟ್ರಿಬ್ಯೂನಲ್ ನೋಟೀಸಿನಂತೆ ಹಲವಾರು ಸಾವಿರ ಕೋಟಿ ಸಾಲ ಮಾಡಿ ದೇಶ ತೊರೆದಿರುವ ಮಲ್ಯಗೆ ಸೇರಿದ್ದ 41,52,272 ಷೇರುಗಳನ್ನು ಹರಾಜು ಹಾಕಲು ತೀರ್ಮಾನಿಸುವುದಾಗಿ ಹೇಳಿತ್ತು.
ಆದಾಯ ತೆರಿಗೆ ಮುಖ್ಯ ಕಮಿಷನರ್ ಹೊರಡಿಸಿದ ಹೇಳಿಕೆಯನುಸಾರ "ಆದಾಯ ತೆರಿಗೆ ಇಲಾಖೆ ಈಗಾಗಲೇ ಷೇರುಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ.ಹೀಗಾಗಿ ಷೇರುಗಳ ಮಾರಾಟ ಹಾಗೂ ಖರೀದಿಯು  ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 281 ರ ಪ್ರಕಾರ ನಿರ್ಬಂಧಿಸಲ್ಪಡಲಿದೆ.ಈ ಷೇರುಗಳನ್ನು ಖರೀದಿಸುವ ಯಾವುದೇ ವ್ಯಕ್ತಿಯು ತಾವೇ ಸ್ವಂತ ಅಪಾಯಕ್ಕೆ ಸಿಲುಕುತ್ತಾರೆ"
ಆಕ್ಟ್ ನ ಸೆಕ್ಷನ್ 281 ರ ಪ್ರಕಾರ, ಇಲಾಖೆಯಿಂದ ನಿರ್ವಹಿಸಲ್ಪಡುವ ಯಾವುದೇ ಪ್ರಕರಣದಲ್ಲಿ ಹರಾಜು ಅಥವಾ ಆಸ್ತಿಗಳ ವರ್ಗಾವಣೆಗೆ ಮುನ್ನ ಮೌಲ್ಯಮಾಪನದ ಅಧಿಕಾರಿಯಿಂದ ಅನುಮತಿಯನ್ನು ಪಡೆಯುವುದು ಕಡ್ಡಾಯವಾಗಿದೆ. 
SCROLL FOR NEXT