ರಾಜ್ಯ

ಪಠ್ಯಪುಸ್ತಕಗಳಿಗೆ ಕ್ಯುಆರ್ ಸಂಕೇತ ಅಳವಡಿಕೆ: ಈ ವರ್ಷದಿಂದಲೇ ಜಾರಿ

Sumana Upadhyaya

ಬೆಂಗಳೂರು: ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರದಿಂದ 6ರಿಂದ 10ನೇ ತರಗತಿಯವರೆಗೆ ಪೂರೈಕೆ ಮಾಡುವ ಪಠ್ಯಪುಸ್ತಕಗಳಿಗೆ ಕ್ಯುಆರ್ ಕೋಡ್ (QR code)ನ್ನು ಬಳಸಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಅಧ್ಯಯನದ ವಿಷಯಗಳನ್ನು ಡಿಜಿಟಲ್ ಮೂಲಕ ಡೌನ್ ಲೋಡ್ ಮಾಡಿಕೊಳ್ಳಬಹುದು.

ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ(ಡಿಎಸ್ಇಆರ್ ಟಿ)ಯ ಅಭಿಯಾನವಾಗಿದ್ದು ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರಲಿದೆ.

ರಾಜ್ಯ ಸರ್ಕಾರದ 6ರಿಂದ 10ನೇ ತರಗತಿಯವರೆಗಿನ ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್ ಪಠ್ಯಪುಸ್ತಗಳಲ್ಲಿ ಕ್ಯುಆರ್ ಸಂಕೇತಗಳು ಬರುತ್ತವೆ. ಪರೀಕ್ಷೆ ಸಂದರ್ಭದಲ್ಲಿ ಈ ಪಠ್ಯಗಳ ವಿಷಯಗಳನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳಲು, ಹೆಚ್ಚು ಅಧ್ಯಯನ ಮಾಡಲು ಇದು ಸಹಾಯ ಮಾಡುತ್ತದೆ. ಆರಂಭದಲ್ಲಿ ಕ್ಯುಆರ್ ಕೋಡನ್ನು ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಮಾತ್ರ ಮುದ್ರಿಸಲಾಗುತ್ತದೆ. ನಂತರ ಎಲ್ಲಾ ಭಾಷೆಗಳ ಪಠ್ಯಪುಸ್ತಕಗಳಲ್ಲಿ ಹಿಂದಿ, ತಮಿಳು, ಉರ್ದು ಮತ್ತು ಮರಾಠಿ ಭಾಷೆಗಳಲ್ಲಿ ಕೂಡ ಕ್ಯುಆರ್ ಕೋಡ್ ಸ್ಕ್ಯಾನಿಂಗ್ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.

ಈ ಸೌಲಭ್ಯವನ್ನು ಬಳಸಲು ದೀಕ್ಷಾ ಎಂಬ ಮೊಬೈಲ್ ಫೋನ್ ಅಪ್ಲಿಕೇಶನ್ ನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಅಭಿವೃದ್ಧಿಪಡಿಸಿದೆ. ಅದು ಕ್ಯುಆರ್ ಕೋಡನ್ನು ಸ್ಕ್ಯಾನ್ ಮಾಡಲು ಸಹಾಯ ಮಾಡುತ್ತದೆ. ವಿದ್ಯಾರ್ಥಿಗಳು ತಮ್ಮ ಮೊಬೈಲ್ ನಲ್ಲಿ ಪಠ್ಯಪುಸ್ತಕದಲ್ಲಿರುವ ಕ್ಯುಆರ್ ಕೋಡ್ ನ್ನು ಸ್ಕ್ಯಾನ್ ಮಾಡಬೇಕು, ನಂತರ ಮೊಬೈಲ್ ಅಪ್ಲಿಕೇಶನ್ ನನ್ನು ಡೌನ್ ಲೋಡ್ ಮಾಡಬೇಕು. ಕ್ಯುಆರ್ ಕೋಡನ್ನು ಸ್ಕ್ಯಾನ್ ಮಾಡಿದ ನಂತರ ಮೊಬೈಲ್ ಆಪ್ ಮೂಲಕ ಹೆಚ್ಚಿನ ಮಾಹಿತಿ ಪಡೆಯಬಹುದು.

ಪಠ್ಯಕ್ಕೆ ಸಂಬಂಧಿಸಿದ ವಿಷಯಗಳ ಆಡಿಯೊ ಮತ್ತು ವಿಡಿಯೊಗಳೆರಡೂ ಇರುತ್ತವೆ. ಎನ್ ಸಿಇಆರ್ ಟಿ ಪಠ್ಯಪುಸ್ತಕವನ್ನು ಉನ್ನತೀಕರಿಸಿ ಅದನ್ನು ವಿದ್ಯಾರ್ಥಿಗಳು ಬಳಸುವಂತೆ ಮಾಡುವುದು ಇದರ ಉದ್ದೇಶವಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

SCROLL FOR NEXT