ಧಾರವಾಡ: ಬಾಣಂತಿಯರು ಜಿಲ್ಲಾ ಸರ್ಕಾರಿ ಹೆರಿಗೆ ಆಸ್ಪತ್ರೆಯ ನೆಲದಲ್ಲಿ ಮಲಗಿದ್ದ ವಿಡಿಯೊ ವೈರಲ್ ಆಗಿದ್ದು ಸರ್ಕಾರಿ ಆಸ್ಪತ್ರೆಗಳ ಪರಿಸ್ಥಿತಿ ಅಲ್ಲಿ ಮಹಿಳೆಯರಿಗೆ ಸಿಗುವ ಚಿಕಿತ್ಸೆಯ ಶೋಚನೀಯ ಸ್ಥಿತಿಯನ್ನು ಸಾರುತ್ತದೆ. ಈ ವಿಡಿಯೊವನ್ನು ಕಳೆದ ವಾರ ಮಾಡಲಾಗಿದ್ದು ಅದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಸಾಮಾಜಿಕ ಕಾರ್ಯಕರ್ತರು ಮತ್ತು ರೋಗಿಗಳು ಆಸ್ಪತ್ರೆಯ ವ್ಯವಸ್ಥಾಪಕರು ಮತ್ತು ಅಧಿಕಾರಿಗಳಲ್ಲಿ ರೋಗಿಗಳಿಗೆ ಸೂಕ್ತ ಸೌಲಭ್ಯ ಒದಗಿಸುವಂತೆ ಒತ್ತಾಯಿಸುತ್ತಿದ್ದಾರೆ.
ಧಾರವಾಡದಲ್ಲಿ ಹೊಸ ಹೆರಿಗೆ ಆಸ್ಪತ್ರೆಗೆ 6 ತಿಂಗಳ ಹಿಂದೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಆದರೆ ಇದುವರೆಗೆ ಕಟ್ಟಡ ನಿರ್ಮಾಣ ಕೆಲಸ ಆರಂಭವಾಗಿಲ್ಲ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯತನವೇ ಕಾರಣವಾಗಿದೆ. ಅಧಿಕಾರಿಗಳು ಕಾರಣ ಕೊಡುವುದನ್ನು ಬಿಟ್ಟು ಸೂಕ್ತ ಸೌಲಭ್ಯ ಒದಗಿಸಬೇಕು ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಶ್ರೀಶೈಲಗೌಡ ಕಾಮತರ್.
ಜಿಲ್ಲಾ ಸರ್ಜನ್ ಗಿರಿಧರ್ ಕುಕನೂರ್ ಹೇಳುವ ಪ್ರಕಾರ ಆಸ್ಪತ್ರೆಯನ್ನು ನವೀಕರಿಸಲಾಗುತ್ತಿದೆ. ಮೂಲಭೂತ ಸೌಕರ್ಯ ವಿಷಯದಲ್ಲಿ ಆಸ್ಪತ್ರೆಯಲ್ಲಿ ಕೊರತೆಯಿರುವುದು ನಿಜ. ಆದರೆ ನಾವು ಸೇವೆಯಲ್ಲಿ ರಾಜಿ ಮಾಡಿಕೊಂಡಿಲ್ಲ ಎನ್ನುತ್ತಾರೆ.
ಎರಡು ವರ್ಷಗಳ ಹಿಂದೆ ಈ ಆಸ್ಪತ್ರೆಯಲ್ಲಿ ಸುಮಾರು 500 ಹೊರ ರೋಗಿಗಳಿರುತ್ತಿದ್ದರು. ನಂತರ ಅದರ ಮೂರು ಪಟ್ಟು ಇಂದು ಹೊರರೋಗಿಗಳ ಸಂಖ್ಯೆ ಹೆಚ್ಚಾಗಿದೆ.
ಆಸ್ಪತ್ರೆಯಲ್ಲಿರುವ ಎಲ್ಲಾ ಹಾಸಿಗೆಗಳು ಭರ್ತಿಯಾಗುತ್ತವೆ. 70 ಗಂಟೆಗಳಲ್ಲಿ 40 ಹೆರಿಗೆಗಳಾಗಿವೆ. ಸಿಬ್ಬಂದಿ ರೂಮ್ ನೀಡುವವರೆಗೆ ಬಾಣಂತಿಯರು ಕಾಯುವಂತೆ ಕೇಳಿಕೊಂಡಿದ್ದೆವು. ನಂತರ ಕೆಲವೇ ಗಂಟೆಗಳಲ್ಲಿ ಅವರಿಗೆ ವ್ಯವಸ್ಥೆ ಮಾಡಿಕೊಡಲಾಯಿತು ಎಂದರು.
ಧಾರವಾಡ ಜಿಲ್ಲಾ ಹೆರಿಗೆ ಆಸ್ಪತ್ರೆಗೆ ಸುತ್ತಮುತ್ತಲ ಮೂರು ಜಿಲ್ಲೆಗಳಿಂದ ರೋಗಿಗಳು ಬರುತ್ತಾರೆ. ಇದು ಸರ್ಕಾರಿ ಆಸ್ಪತ್ರೆಯಾಗಿರುವುದರಿಂದ ಬೆಡ್ ಭರ್ತಿಯಾಗಿದೆ, ಖಾಲಿಯಿಲ್ಲ, ನಿಮಗೆ ತುರ್ತು ಇದ್ದರೆ ಬೇರೆಡೆ ಹೋಗಿ ಎಂದು ರೋಗಿಗಳಿಗೆ ಹೇಳಲು ಸಾಧ್ಯವಿಲ್ಲ. ಚಿಕಿತ್ಸೆ ನೀಡುವುದು ನಮ್ಮ ಆದ್ಯ ಕರ್ತವ್ಯ. ಎಲ್ಲಾ ಬಾಣಂತಿಯರು ಮತ್ತು ಶಿಶುಗಳು ಆರೋಗ್ಯವಾಗಿದ್ದಾರೆ ಎಂದರು.
ನೂತನ ಕಟ್ಟಡ ಕಾಮಗಾರಿ ಕೆಲಸ ಆರಂಭವಾಗಲಿದೆ. ಭೂ ವಿಜ್ಞಾನ ಇಲಾಖೆಯಿಂದ ಎನ್ಒಸಿ(ಆಕ್ಷೇಪಣೆ ಇಲ್ಲದ ಅರ್ಜಿ) ಸಿಗಲು ತಡವಾದ್ದರಿಂದ ಕಾಮಗಾರಿ ವಿಳಂಬವಾಯಿತು. ಕೇಂದ್ರ ಸರ್ಕಾರದಿಂದ ಸುಮಾರು 26 ಕೋಟಿ ರೂಪಾಯಿ ನೆರವಿನೊಂದಿಗೆ ಮುಂದಿನ 18 ತಿಂಗಳಲ್ಲಿ ಕೆಳ ಮತ್ತು 2 ಮಹಡಿ ಕಟ್ಟಡ ತಲೆಯೆತ್ತಲಿದೆ ಎಂದು ಗಿರಿಧರ್ ಕುಕನೂರ್ ಹೇಳಿದರು.
ಆಸ್ಪತ್ರೆಯಲ್ಲಿ ಸಿಸಿಟಿವಿ ಕ್ಯಾಮರಾವಿದ್ದು ಪ್ರತಿ ವಾರ್ಡ್ ಗಳನ್ನು ಗಮನಿಸಲಾಗುತ್ತದೆ. ಸಿಬ್ಬಂದಿಗೆ ಈ ಬಗ್ಗೆ ಅರಿವಿದ್ದು ಯಾವುದೇ ತಪ್ಪು ನಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.