ಬೆಂಗಳೂರು: ಕೇರಳ, ಕೊಡಗು ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಸಂಭವಿಸಿದ ಪ್ರವಾಹದ ಪರಿಣಾಮ ಅಪಾರ ಪ್ರಮಾಣದ ನಷ್ಟ ಎದುರಾಗಿ ಇದೀಗ ಮಸಾಲೆ ಪದಾರ್ಥಗಳ ಬೆಲೆಗಳು ಗಗನಕ್ಕೇರಿವೆ.
ಮಲೆನಾಡು ಭಾಗದಲ್ಲಿ ಬೆಳೆಯಲಾಗುತ್ತಿದ್ದ ಮಸಾಲೆ ಪದಾರ್ಥಗಳು ಪ್ರವಾಹ ಹಿನ್ನಲೆಯಲ್ಲಿ ಸಂಪೂರ್ಣವಾಗಿ ನಾಶಗೊಂಡಿದೆ. ಇನ್ನು ಗೋದಾಮುಗಳಲ್ಲಿರಿಸಲಾಗಿದ್ದ ಮಸಾಲೆ ಪದಾರ್ಥಗಳ ಸಂಗ್ರಹ ಈಗಾಗಲೇ ಕಡಿಮೆಯಾಗಿದ್ದು, ಇದೀಗ ಅಭಾವ ಹೆಚ್ಚಾಗಿರುವ ಹಿನ್ನಲೆಯಲ್ಲಿ ಮಸಾಲೆ ಪದಾರ್ಥಗಳ ಬೆಲೆ ದುಬಾರಿಯಾಗಿದೆ.
ಏಲಕ್ಕಿ, ಕರಿಮೆಣಸು, ಲವಂಗ ಜಾಯಿಕಾಯಿ ಸೇರಿದಂತೆ ಇನ್ನಿತರೆ ಮಸಾಲೆ ಪದಾರ್ಥಗಳ ಬೆಲೆಗಳು ಏರಿಕೆಯಾಗಿದ್ದು, ಮಧ್ಯಮ ವರ್ಗದ ಜನರ ಬೇಜು ಸುಡುವಂತೆ ಮಾಡುವಂತೆ ಮಾಡಿದೆ.
ಪ್ರವಾಹ ಎದುರಾದ ಹಿನ್ನಲೆಯಲ್ಲಿ ಗೋದಾಮುಗಳಲ್ಲಿ ಇರಿಸಲಾಗಿದ್ದ ಪದಾರ್ಥಗಳು ಸಂಪೂರ್ಣವಾಗಿ ನಾಶಗೊಂಡಿವೆ. ಈ ಹಿನ್ನಲೆಯಲ್ಲಿ ಬೆಲೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಸಾಲೆ ಪದಾರ್ಥದ ವ್ಯಾಪಾರಿ ಸುರೇಶ್ ರಾಥೋಡ್ ಎಂಬುವವರು ಮಾತನಾಡಿ, ಶೇ.60ರಷ್ಟು ಬೆಳೆಗಳು ಪ್ರವಾಹದಲ್ಲಿ ನಾಶಗೊಂಡಿವೆ. ಗೋದಾಮುಗಳಲ್ಲಿ ಇರಿಸಲಾಗಿದ್ದ ಪದಾರ್ಥಗಳೂ ಕೂಡ ನಾಶಗೊಂಡಿವೆ. ಹೀಗಾಗಿ ಮಸಾಲೆ ಪದಾರ್ಥಗಳನ್ನು ಸರಿಯಾಗಿ ವಿತರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಬೆಲೆ ಏರಿಕೆ ಬಗ್ಗೆ ಮೊದಲೇ ಮಾಹಿತಿ ತಿಳಿದಿದ್ದ ಕೆಲವರು ಈ ಮೊದಲೇ ಹೆಚ್ಚೆಚ್ಚು ಖರೀದಿ ಮಾಡಿದ್ದರು ಎಂದು ಹೇಳಿದ್ದಾರೆ.
ಮತ್ತೊಬ್ಬ ವ್ಯಾಪಾರಿ ಶಂಕರ್ ಮಲೆ ಎಂಬುವವರು ಮಾತನಾಡಿ, ಕಳೆದ 10 ವರ್ಷಗಳಲ್ಲಿ ಮಸಾಲೆ ಪದಾರ್ಥಗಳ ಬೆಲೆ ಏರಿಕೆಯಾಗಿರುವುದು ಇದೇ ಮೊದಲು. ಶ್ರೀಲಂಕಾದಂತಹ ದೇಶಗಳಿಂದ ಆಮದು ಮಾಡಿಕೊಳ್ಳಬಹುದು ಆದರೆ, ಬೆಲೆಗಳು ದುಬಾರಿಯಾಗಿರುತ್ತದೆ ಎಂದು ತಿಳಿಸಿದ್ದಾರೆ.
ಭೂಕುಸಿತ ಸಂಭವಿಸಿದ ಪರಿಣಾಮ ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತಿದ್ದ ಕರಿಮೆಣಸು ಹಾಗೂ ಏಲಕ್ಕಿ ಬೆಳೆಗಳು ನಾಶಗೊಂಡಿವೆ. ಬೆಳೆ ನಾಶ ಸರಿಪಡಿಸಲು ಕನಿಷ್ಟ ಮೂರು ತಿಂಗಳಾದರೂ ಬೇಕು. ನಷ್ಟಗಳನ್ನು ಲೆಕ್ಕ ಹಾಕಲು ಮಂಡಳಿ ಸಮೀಕ್ಷೆ ನಡೆಸುತ್ತಿದೆ ಎಂದು ಮಸಾಲೆ ಪದಾರ್ಥದ ಮಂಡಳಿ ನಿರ್ದೇಶಕ ಪಿ.ಎಂ.ಸುರೇಶ್ ಕುಮಾರ್ ಅವರು ಹೇಳಇದ್ದಾರೆ.