ರಾಜ್ಯ

ನಂದಿ ಗಿರಿಯಲ್ಲಿ ವಾರಾಂತ್ಯ ಸಂತೆಗೆ ಚಾಲನೆ: 12 ಸಾವಿರ ಜನರು ಭಾಗಿ

Manjula VN
ಚಿಕ್ಕಬಳ್ಳಾಪುರ: ವಿಶ್ವಪ್ರಸಿದ್ಧ ನಂದಿಗಿರಿಧಾಮ ವಾರಾಂತ್ಯದ ದಿನವಾಗಿದ್ದ ಶನಿವಾರ ಹಾಗೂ ಭಾನುವಾರ ಮದುವಣಗಿತ್ತಿಯಂತೆ ಸಿಂಗಾರಗೊಂಡಿತ್ತು. ಗಿರಿಧಾಮದ ಎಲ್ಲೆಲ್ಲೂ ಹಬ್ಬದ ವಾತಾವರಣ ಕಳೆಕಟ್ಟಿತ್ತು. 
ಪ್ರವಾಸಿಗರನ್ನು ಮತ್ತಷ್ಟು ಸೆಳೆಯುವ ಸಲುವಾಗಿ ಜಿಲ್ಲಾಧಿಕಾರಿಗಳು ನಂದಿ ಗಿರಿಧಾಮದಲ್ಲಿ ವಾರಾಂತ್ಯದ ದಿನಗಳಲ್ಲಿ ನಂದಿ ಸಂತೆ ನಡೆಸಲು ನಿರ್ಧರಿಸಿದ್ದು, ಇದರಂತೆ ಶನಿವಾರ ನಂದಿ ಸಂತೆಗೆ ಚಾಲನೆ ನೀಡಲಾಯಿತು. 
ವಾರಾಂತ್ಯ ದಿನವಾದ ಭಾನುವಾರ ನಂದಿ ಸಂತೆಯಲ್ಲಿ 12,000ಕ್ಕೂ ಅಧಿಕ ಜನರು ಭಾಗಿಯಾಗಿದ್ದರು. ಬೆಂಗಳೂರಿನಿಂದ 65 ಕಿ.ಮೀ ದೂರದಲ್ಲಿರುವ ಈ ನಂದಿ ಬೆಟ್ಟ ಸಾಕಷ್ಟು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಜಿಲ್ಲಾಧಿಕಾರಿಗಳು ನಡೆಸುತ್ತಿರುವ ಈ ನಂದಿ ಸಂತೆಯನ್ನು ಸ್ಥಳೀಯ ಕಲೆಗಾರರು ಹಾಗೂ ಬೆಂಗಳೂರಿಗರು ಸ್ವಾಗತಿಸಿದರು. 
ಗಿರಿಧಾಮದಲ್ಲಿ ಗುಡಿಕೈಗಾರಿಕೆ ಉತ್ಪನ್ನಗಳು, ಸಿರಿಧಾನ್ಯ ಉತ್ಪನ್ನಗಳು, ತಾಜಾ ತರಕಾರಿಗಳ ಖರೀದಿಗೆ ಅನುವು ಮಾಡಿಕೊಡಲಾಗಿತ್ತು. ಸಾಕಷ್ಟು ಅಂಗಡಿಗಳು ಪ್ರವಾಸಿಗರನ್ನು ಆಕರ್ಷಿಸಿತ್ತು. ಇತರೆ ಎಲ್ಲಾ ಅಂಗಡಿಗಳಿಗಿಂತ ಆಹಾರ ತಿನಿಸುಗಳ ಅಂಗಡಿಗಳಲ್ಲಿ ಜನರು ಹೆಚ್ಚಾಗಿ ಸೇರಿದ್ದರು. ವಿವಿಧ ರೀತಿಯ ದೋಸೆಗಳು, ಇಡ್ಲಿಗಳು, ವಡೆ ಹಾಗೂ ವಿವಿಧ ರೀತಿಯ ಅನ್ನದ ಪದಾರ್ಥಗಳನ್ನು ಆಹಾರ ಪ್ರಿಯರು ಆಕರ್ಷಿತರಾಗುವಂತೆ ಮಾಡಿತ್ತು. 
ಚಿಕ್ಕಬಳ್ಳಾಪುರ ಉಪ ಆಯುಕ್ತ ಅನಿರುಧ್ ಶರವಣ್ ಅವರ ಸೂಚನೆಯಂತೆಯೇ 5 ಸರ್ಕಾರಿ ಶಾಲೆಗಳ ಶಿಕ್ಷಕರು ಪ್ರವಾಸಿ ತಾಣಗಳಲ್ಲಿ ಚಿತ್ರಕಲೆಗಳನ್ನು ಬಿಡಿಸಿದರು. 
ನಂದಿ ಸಂತೆಯಲ್ಲಿ ಪಾಲ್ಗೊಂಡಿದ್ದ ಟೆಕ್ಕಿ ದೀಪಿಕಾ ಎಂಬುವವರು ಮಾತನಾಡಿ, ಇದೊಂದು ರೀತಿಯ ವಿಭಿನ್ನ ಅನುಭವ ಎನಿಸಿತು ಎಂದು ಹೇಳಿದ್ದಾರೆ. 
ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಶಾಂತ್ ಎಂಬುವವರು ಕುಟುಂಬ ಸಮೇತರಾಗಿ ನಂದಿ ಸಂತೆಯಲ್ಲಿ ಪಾಲ್ಗೊಂಡಿದ್ದು, ನಂದಿ ಸಂತೆಯಲ್ಲಿ ಮಾಡಿದ್ದ ವ್ಯವಸ್ಥೆಗಳು ಅತ್ಯುತ್ತಮವಾಗಿತ್ತು. ಸ್ವಚ್ಛತೆಯನ್ನು ಉತ್ತಮವಾಗಿ ಕಾಪಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. 
ಉಪ ಆಯುಕ್ತರಾದ ಅನಿರುಧ್ ಶರವಣ ಮಾತನಾಡಿ, ನಂದಿ ಸಂತೆ ಯಶಸ್ವಿಯಾಗಿದೆ. ಸಣ್ಣಪುಟ್ಟ ಮಳಿಗೆಗಳಲ್ಲಿ ಉತ್ತಮವಾಗಿ ವ್ಯಾಪಾರಗಳಾಗಿವೆ. ಮುಂದಿನ ವಾರಗಳಲ್ಲಿಯೂ ಇದೇ ರೀತಿಯ ಪ್ರತಿಕ್ರಿಯೆಗಳನ್ನು ನಿರೀಕ್ಷಿಸುತ್ತಿದ್ದೇವೆಂದು ತಿಳಿಸಿದ್ದಾರೆ. 
SCROLL FOR NEXT